ನೆಲ್ಯಾಡಿ/ದಕ್ಷಿಣ ಕನ್ನಡ: ಬಹುತೇಕ ಅಪಘಾತಗಳು ಚಾಲಕರು ನಿದ್ದೆಯ ಮಂಪರಿನಲ್ಲಿರುವುದರಿಂದ ಸಂಭವಿಸುತ್ತವೆ ಎಂಬುದನ್ನರಿತ ವಿದ್ಯಾರ್ಥಿಯೋರ್ವ ತನ್ನ ಗೆಳೆಯನೊಂದಿಗೆ ಸೇರಿ ಒಂದು ಪುಟ್ಟ ಸಾಧನವನ್ನು ಕಂಡು ಹಿಡಿದಿದ್ದಾನೆ.
ಚಾಲಕರು ನಿದ್ದೆ ಮಂಪರಿನಿಂದ ಹೊರಬರಲು ವಿನೂತನ ಉಪಕರಣ ಆವಿಷ್ಕರಿಸಿದ ನೆಲ್ಯಾಡಿ ವಿದ್ಯಾರ್ಥಿ ಈತನ ಹೆಸರು ಚಿನ್ಮಯ್ ಗೌಡ. ನೆಲ್ಯಾಡಿಯ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈ ಬಾಲಕ ತನ್ನ ಗೆಳೆಯ ವಿತಿಕ್ ಶೆಟ್ಟಿಯೊಂದಿಗೆ ಸೇರಿಕೊಂಡು "ಲೈಫ್ ಲೈನ್" ಎಂಬ ವಿನೂತನ ಸಾಧನವನ್ನು ಸಂಶೋಧನೆ ಮಾಡಿದ್ದಾನೆ.
ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ನಿವಾಸಿ ಚಂದ್ರಶೇಖರ ಹಾಗು ಚೇತನಾ ದಂಪತಿಯ ಪುತ್ರನಾದ ಚಿನ್ಮಯ್ ಲಾಕ್‌ಡೌನ್ ಸಮಯವನ್ನು ಸದುಪಯೋಗ ಮಾಡುವ ಸಂಕಲ್ಪದೊಂದಿಗೆ ಮನೆಯಲ್ಲೇ ಕುಳಿತು ಹೊಸ ಹೊಸ ಪ್ರಯತ್ನಗಳ ಮೂಲಕ ಈ ಸಾಧನವನ್ನು ರೂಪಿಸಿದ್ದಾನೆ.
ರಾಷ್ಟ್ರಮಟ್ಟದ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸುವ ಉದ್ದೇಶದಿಂದ "ಲೈಫ್ ಲೈನ್" ಎಂಬ ಸಾಧನವನ್ನು ಆವಿಷ್ಕಾರ ಮಾಡಿದ್ದಾನೆ. ಕಾರಣಾಂತರಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಈ ಸಾಧನವನ್ನು ಇನ್ನಷ್ಟು ಪರಿಷ್ಕರಿಸಿ ವಾಹನ ಚಾಲಕರಿಗೆ ಉಪಯುಕ್ತ ವಸ್ತುವಾಗಿಸಬೇಕೆಂಬ ಉದ್ದೇಶವನ್ನು ಹೊಂದಿದ್ದಾನೆ.
ಏನಿದರ ವಿಶೇಷ?:ರಾತ್ರಿ ವೇಳೆಯಲ್ಲಿ ಸಂಚರಿಸುವ ಘನ ಹಾಗು ಲಘು ವಾಹನಗಳ ಚಾಲಕರು ಕೆಲಸದ ಒತ್ತಡದಿಂದಲೋ ಅಥವಾ ಇತರ ಕಾರಣಗಳಿಂದ ಚಾಲನೆ ಸಮಯದಲ್ಲಿ ನಿದ್ರೆಗೆ ಜಾರುವುದು ಸಾಮಾನ್ಯ. ಇಂತಹ ಸಮಯದಲ್ಲಿ ಚಾಲಕರು ಚಿನ್ಮಯ್ ಆವಿಷ್ಕಾರ ಮಾಡಿದ ಈ ಕನ್ನಡಕವನ್ನು ಹಾಕಿಕೊಂಡರೆ ಈ ಸಮಸ್ಯೆ ಇರುವುದಿಲ್ಲವಂತೆ.
ನೋಡಲು ಇದೊಂದು ಸಾಮಾನ್ಯ ಕನ್ನಡಕ. ಆದರೆ ಇದನ್ನು ಧರಿಸಿ ನೀವೇನಾದರು 2 ಸೆಕೆಂಡ್ ಕಣ್ಣು ರೆಪ್ಪ ಮುಚ್ಚಿಕೊಂಡರೆ ಅಲಾರಾಂನಂತೆ ಜೋರಾಗಿ ಬಜರ್ ಒಂದು ಬೀಪ್ ಸದ್ದಾಗುವುದರ ಜತೆಗೆ ಎರಡೂ ಕಣ್ಣಿನ ಬಳಿಯೂ ವೈಬ್ರೇಟ್ ಆಗಲು ಆರಂಭಿಸುತ್ತದೆ. ಮುಚ್ಚಿದ ಕಣ್ಣು ರೆಪ್ಪೆ ತೆರೆಯುವ ತನಕ ಈ ಶಬ್ದ ಮತ್ತು ವೈಬ್ರೇಟ್ ನಿಲ್ಲುವುದಿಲ್ಲ.
ಸಾಮಾನ್ಯ ಕನ್ನಡಕವೊಂದಕ್ಕೆ ಕೂಲಿಂಗ್ ಗ್ಲಾಸ್, ಐ ಬಂಕ್ ಸೆನ್ಸಾರ್, ಮತ್ತು ಆರ್ಡಿನೊ ನ್ಯಾನೊ ಚಿಪ್, ಮಿನಿ ಸೌಂಡ್ ಬಜರ್, ವೈಬ್ರೇಟರ್, ಮತ್ತು 9 ವ್ಯಾಟ್‌ನ ಚಿಕ್ಕ ಬ್ಯಾಟರಿ, ಹಾಗು ಇತರ ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿಕೊಂಡು ಈ ಸಾಧನವನ್ನು ತಯಾರಿಸಲಾಗಿದೆ.
ಪ್ರಸ್ತುತ ಈ ಸಾಧನವನ್ನು ಕನ್ನಡಕಕ್ಕೆ ಜೋಡಿಸಲಾಗಿದೆ. ಇದನ್ನೇ ಇನ್ನಷ್ಟು ವಿನ್ಯಾಸಗೊಳಿಸಿ, ಕನ್ನಡಕ ಇಲ್ಲದೆ ಕೇವಲ ಸಾಧನವನ್ನು ಮಾತ್ರ ಕಣ್ಣಿನ ಪಕ್ಕದಲ್ಲಿ ಧರಿಸುವ ವ್ಯವಸ್ಥೆ ಮಾಡಿದರೆ ಕನ್ನಡಕ ಇಷ್ಟಪಡದವರಿಗೂ ಉಪಯುಕ್ತವಾದೀತು ಎನ್ನುತ್ತಾನೆ ವಿದ್ಯಾರ್ಥಿ ಚಿನ್ನಯ್.
ಅಪಘಾತಗಳೇ ಉಪಕರಣ ಮಾಡಲು ಪ್ರೇರಣೆ:
ನನ್ನ ಶಾಲೆಯ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ಇದೆ. ಅನೇಕ ಅಪಘಾತಗಳಿಗೆ ಚಾಲಕರು ನಿದ್ದೆ ಮಂಪರಿನಲ್ಲಿರುವುದು ಕಾರಣವೆಂದು ತಿಳಿದಾಗ ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕೆಂಬ ಇಚ್ಛೆಯಾಯಿತು. ಲಾಕ್‌ಡೌನ್ ಸಂದರ್ಭ ಶಾಲೆಗಳಿಗೆ ರಜೆ ಇದ್ದ ಕಾರಣ ನನ್ನ ಯೋಜನೆ ಕಾರ್ಯಗತಗೊಳಿಸಲು ಸಮಯವೂ ಸಿಕ್ಕಿತು.
ಈ ಸಾಧನ ಬಳಸಿಕೊಂಡರೆ ಚಾಲಕರು ನಿದ್ದೆಯ ಮಂಪರಿನಿಂದ ಹೊರ ಬಂದು ಜಾಗೃತ ಸ್ಥಿತಿಯಲ್ಲಿ ಇರಬಹುದು. ಭವಿಷ್ಯದಲ್ಲಿ ನಾನಾ ರೀತಿಯ ಸಂಶೋಧನೆಗಳು ಮಾಡಬೇಕೆಂಬ ಆಸೆ ಇದೆ ಎನ್ನುತ್ತಾನೆ ಚಿನ್ಮಯ್. ಇದಕ್ಕೆ ಚಿನ್ಮಯ್ ಪೋಷಕರು ಹಾಗು ಶಾಲಾ ಪ್ರಾಂಶುಪಾಲರು, ಶಿಕ್ಷಕರು ಹಾಗು ಸಹಪಾಠಿಗಳ ಬೆಂಬಲವೂ ಇದೆ.