ಮಂಗಳೂರು:ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಚಾರವಾಗಿ ಮೊದಲನೆಯ ಆದ್ಯತೆ ದಕ್ಷಿಣ ಕನ್ನಡ ಜಿಲ್ಲೆಗೆ ನೀಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ದ.ಕ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಅಧಿಕಾರಿಗಳ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಒತ್ತು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನರೇಂದ್ರ ಮೋದಿಯವರು ಕುಡಿಯುವ ನೀರಿಗಾಗಿ ಪ್ರತಿ ಮನೆ-ಮನೆಗೂ ನಳ್ಳಿ ವ್ಯವಸ್ಥೆ ಮಾಡಬೇಕೆಂದು ಚಿಂತನೆ ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿಯೂ ನಾವು ಮುಂದುವರಿಯುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಸ್ಮಶಾನಗಳ ಕೊರತೆಯಿದೆ. ಆದ್ದರಿಂದ ತಾಪಂ, ಗ್ರಾಪಂ, ಜಿಪಂ ಸದಸ್ಯರು ಸ್ಮಶಾನಗಳಿಗೆ ಯೋಗ್ಯವಾದ ಸ್ಥಳಗಳನ್ನು ಸೂಚಿಸಿದಲ್ಲಿ ಅದಕ್ಕೆ ಬೇಕಾದ ಅನುದಾನವನ್ನು ರಾಜ್ಯ ಸರ್ಕಾರ ವ್ಯವಸ್ಥೆ ಮಾಡುತ್ತದೆ. ಸ್ವಚ್ಛ ಭಾರತದ ಮೂಲಕ ಘನ ತ್ಯಾಜ್ಯ ನಿರ್ವಹಣೆಗೆ ಕ್ಲಸ್ಟರ್ ಮೂಲಕ ಏಳೆಂಟು ಗ್ರಾಪಂ ಸೇರಿ ಯುನಿಟ್ ಮಾಡಿದರೆ, ಸರ್ಕಾರ ಇದರ ನಿರ್ವಹಣೆಗೆ ಬೇಕಾದ ಅನುದಾನವನ್ನು ಒದಗಿಸುತ್ತದೆ ಎಂದು ಹೇಳಿದರು.
ವಿದ್ಯುತ್ ಕೊರತೆ ನಿವಾರಣೆಗೆ ಸೋಲಾರ್ ಮೂಲಕ ವಿದ್ಯುತ್ ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡುವ ಚಿಂತನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ಅದಕ್ಕೆ ಗ್ರಾ.ಪಂಗೆ ಸರ್ಕಾರದಿಂದ ಏನು ಸಹಕಾರ ಬೇಕೋ ಅದನ್ನು ನಾವು ಕೊಡುತ್ತೇವೆ. ಇದಕ್ಕೆ ಗ್ರಾಪಂ ಅಧ್ಯಕ್ಷರು ನಿಮ್ಮ ಸಮಿತಿಯ ಸದಸ್ಯರನ್ನು ಕರೆದು ಸಭೆ ನಡೆಸಿ ಅನುದಾನವನ್ನು ಸರಿಯಾಗಿ ವಿನಿಯೋಗಿಸಿ ಎಂದು ಹೇಳಿದರು.