ಬೆಳ್ತಂಗಡಿ: ಕ್ಷೇತ್ರದಲ್ಲಿ ಜನತೆ ವಿವಿಧ ರೂಪದಲ್ಲಿ ತಮ್ಮ ಭಕ್ತಿ ವ್ಯಕ್ತಪಡಿಸುತ್ತಾರೆ. ಆದರೆ, ಭೌತಿಕ ವಿಚಾರಗಳಿಗಿಂತ ಹೆಚ್ಚು ಸತ್ಕಾರ್ಯ, ಸದ್ವಿಚಾರ, ಉತ್ತಮ ಚಿಂತನೆಗಳೊಂದಿಗೆ ಕಾರ್ಯ ನಿರ್ವಹಿಸಿದಾಗ ಪುಣ್ಯದ ಫಲ ಲಭಿಸುತ್ತದೆ. ಜೊತೆಗೆ ಶಾಂತಿ, ಸಂತೋಷ ಹಾಗೂ ನೆಮ್ಮದಿಯೂ ಸಿಗುತ್ತದೆ. ಕ್ಷೇತ್ರದ ಮೇಲಿರುವ ಹಲವು ಜನರ ಪ್ರೀತಿ, ವಿಶ್ವಾಸವೇ ನಾವು ಈವರೆಗೆ ಗಳಿಸಿರುವ ಅಮೂಲ್ಯ ಆಸ್ತಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಪಾದಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಧರ್ಮಾಧಿಕಾರಿ..
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಹಿನ್ನೆಲೆ ಕಾರ್ತಿಕ ಸೋಮವಾರದ ನಿಮಿತ್ತ ಉಜಿರೆಯಿಂದ ಧರ್ಮಸ್ಥಳಕ್ಕೆ ಆಯೋಜಿಸಿದ್ದ ಪಾದಯಾತ್ರೆಗೆ ಸಂಬಂಧಿಸಿದಂತೆ ಪಾದಯಾತ್ರಿಗಳನ್ನು ಉದ್ದೇಶಿಸಿ ಅಮೃತವರ್ಷಿಣಿ ಸಭಾ ಭವನದಲ್ಲಿ ಆಶೀರ್ವಚನ ನೀಡಿದರು. ಪ್ರಪಂಚಕ್ಕೆ ಬಂದ ಮೇಲೆ ಉತ್ತಮ ಕಾರ್ಯಗಳನ್ನು ಮಾಡಬೇಕು. ನಿಷ್ಕಲ್ಮಶ ಕಾರ್ಯಗಳಿಂದ ಸಾತ್ವಿಕ ಶಕ್ತಿ ಜಾಗೃತಗೊಳ್ಳುತ್ತದೆ.
ಯಕ್ಷಗಾನಗಳಲ್ಲಿ ಹೆಚ್ಚಿನ ಪ್ರಸಂಗಗಳ ತಾತ್ಪರ್ಯ ಅಧರ್ಮದ ನಾಶ, ಧರ್ಮದ ಪ್ರಜ್ವಲನೆಯಾಗಿದೆ. ನಾವು ಉತ್ತಮ ಕಾರ್ಯಗಳನ್ನು ಮಾಡುವಾಗ ಟೀಕೆಗಳು ಎದುರಾಗುವುದು ಸಹಜ. ಆದರೆ, ಸಣ್ಣಪುಟ್ಟ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ನಾವು ಮಾಡುವ ಉತ್ತಮ ಕಾರ್ಯಗಳತ್ತ ಗಮನ ಹರಿಸುವುದು ಅವಶ್ಯಕ. ಪಾದಯಾತ್ರೆ ಆರಂಭಿಸಿದ ವರ್ಷದಲ್ಲಿ ಟೀಕೆಗಳು ಕೇಳಿಬಂದವು. ಆದರೆ, ಇದೀಗ ವರ್ಷದಿಂದ ವರ್ಷಕ್ಕೆ ಪಾದಯಾತ್ರಿಗಳ ಸಂಖ್ಯೆ ಇಮ್ಮಡಿಗೊಳ್ಳುತ್ತಾ ಸಾಗುತ್ತಿದೆ ಎಂದರು.
ಧರ್ಮಸ್ಥಳ ಸತ್ಯ, ಧರ್ಮ, ನ್ಯಾಯ, ನೀತಿ ಸದಾ ಜಾಗೃತಿಯಲ್ಲಿರುವ ಪವಿತ್ರ ಕ್ಷೇತ್ರ. ದೇಶ - ವಿದೇಶಗಳ ಭಕ್ತರೂ ಕ್ಷೇತ್ರದ ಬಗ್ಗೆ ಅಪಾರ ಶ್ರದ್ಧಾ - ಭಕ್ತಿ ಮತ್ತು ಗೌರವ ಹೊಂದಿದ್ದಾರೆ. ಕ್ಷೇತ್ರದಿಂದಲೂ ಲೋಕಕಲ್ಯಾಣಕ್ಕಾಗಿ ಮೊದಲಾದ ಸೇವಾ ಕಾರ್ಯಗಳು ದೇಶವ್ಯಾಪಿಯಾಗಿ ನಿರಂತರವಾಗಿ ಸಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಸಜ್ಜನ ಶಕ್ತಿ ಸಾಮೂಹಿಕವಾಗಿ ಜಾಗೃತವಾದಾಗ ಕ್ರಾಂತಿಕಾರಿ ಪರಿವರ್ತನೆ ಸಾಧ್ಯ. ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದ ಕಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ ಸಾಗುವುದೇ ನಮ್ಮೆಲ್ಲರ ಉದ್ದೇಶವಾಗಿದೆ. ಪ್ರತಿ ವರ್ಷ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಎಲ್ಲರಿಗೂ ಸಂತೋಷ, ತೃಪ್ತಿ ಮತ್ತು ಧನ್ಯತಾಭಾವವನ್ನು ಮೂಡಿಸಿದೆ ಎಂದರು.