ಮಂಗಳೂರು:ಡಿ.ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮವು ರಾಜ್ಯಾದ್ಯಂತ ಕೌಶಲ್ಯ ಕರ್ನಾಟಕ ಯೋಜನೆಗೆ ವ್ಯಾಪಕ ಸಿದ್ಧತೆ ನಡೆಸುತ್ತಿದ್ದು, ವಿದೇಶಿ ವಸ್ತುಗಳ ಬದಲು ಸ್ವಾವಲಂಬಿ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಹೇಳಿದರು.
ಡಿ.ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಉತ್ಪಾದನೆಗೆ ಒತ್ತು ನಗರದ ಸರ್ಕಿಟ್ ಹೌಸ್ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 224 ತಾಲೂಕುಗಳಿದ್ದು, ಪ್ರತೀ ತಾಲೂಕಿನಲ್ಲಿ ತಲಾ 50ರಂತೆ ನಿಗಮದಿಂದ ವರ್ಷ ಪೂರ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ಎಲ್ಲಾ ರೀತಿಯ ಗ್ರಾಮೀಣ ಉತ್ಪಾದನೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಡಿ.ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದಡಿಯಲ್ಲಿ 206 ಜಾತಿಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಯಾವೆಲ್ಲಾ ವೃತ್ತಿ ಕೌಶಲ್ಯಗಳನ್ನು ಪುನರುಜ್ಜೀವನಗೊಳಿಸಬೇಕೆಂದು ಪಟ್ಟಿ ತಯಾರಿಸಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದವರಿಗೆ ಸುಮಾರು ಐದು ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ವಿದೇಶಿ ವಸ್ತುಗಳ ಪ್ರಭಾವದಿಂದ ದೇಶಿಯ ಉತ್ಪನ್ನಗಳು ಮರೆಯಾಗುತ್ತಿವೆ. ಆದ್ದರಿಂದ ನಿಗಮದಿಂದ ಕೌಶಲ್ಯ ತರಬೇತಿ ನೀಡಿ ಸಾಂಪ್ರದಾಯಿಕ ಉತ್ಪನ್ನ, ಕಸುಬುಗಳನ್ನು ಮತ್ತೆ ಮೇಲ್ಪಂಕ್ತಿಗೆ ಬರುವಂತೆ ಮಾಡುವ ಉದ್ದೇಶವಿದೆ. ಈ ಮೂಲಕ ಕೃಷಿ, ಅರಣ್ಯ, ಸಮುದ್ರ ಉತ್ಪನ್ನಗಳಿಗೆ ಮಾನ್ಯತೆ ದೊರಕುವಂತೆ ಮಾಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಸಂಚಾರ ನಿಯಮ ಪಾಲನೆ ಮಾಡಲಿ ಅಂತ ದಂಡ ವಿಧಿಸಲಾಗುತ್ತೆ: ಮಂಗಳೂರು ನಗರ ಪೊಲೀಸ್ ಆಯುಕ್ತ
ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ನಿಗಮದಡಿಯಲ್ಲಿ ಬರುವ 206 ಜಾತಿಗಳಿಗೂ ತರಬೇತಿ ಹಾಗೂ ಸವಲತ್ತು ಸಿಗುವಂತೆ ಮನೆ ಮನೆಗಳಿಗೆ ತೆರಳಿ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ ಎಂದು ಆರ್.ರಘು ಕೌಟಿಲ್ಯ ಹೇಳಿದರು.