ಪುತ್ತೂರು: ಕೊರೊನಾ ಸೋಂಕಿನ ಭೀತಿಯಿಂದ ಪುತ್ತೂರು ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಮತ್ತು ಕಬ್ಬಿಣದ ಬೇಲಿ ಅಳವಡಿಸುವ ಮೂಲಕ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ.
ಪುತ್ತೂರು ಪೊಲೀಸ ಠಾಣೆಗಳಿಗೆ ಬ್ಯಾರಿಕೇಡ್ ಆಳವಡಿಕೆ ಪುತ್ತೂರು ನಗರ ಹಾಗೂ ಮಹಿಳಾ ಪೊಲೀಸ್ ಠಾಣೆಗಳು ಸಂಪೂರ್ಣ ಸೀಲ್‌ಡೌನ್ ಮಾಡಿದಂತೆ ಕಾಣುತ್ತವೆ. ಆದರೆ, ಇವು ಸೀಲ್‌ಡೌನ್ ಆಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಹೀಗೆ ಮಾಡಲಾಗಿದೆ. ಠಾಣೆಗಳಿಗೆ ದೂರು ನೀಡಲು ಬರುವವರಿಗೆ ಹೊರ ಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಒಬ್ಬರು ಮಾತ್ರ ಒಳಬರುವಂತೆ ಪ್ರವೇಶದ್ವಾರದಲ್ಲಿ ಅವಕಾಶ ನೀಡಲಾಗಿದೆ. ಠಾಣೆ ಪ್ರವೇಶಿಸುವ ವ್ಯಕ್ತಿ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು.
ಪೊಲೀಸರ ಭಯಕ್ಕೆ ಕಾರಣವೇನು?
ವಿಟ್ಲ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ದೃಢಪಟ್ಟ ನಂತರ ಪುತ್ತೂರು ತಾಲೂಕಿನ ಎಲ್ಲ ಠಾಣೆಗಳ ಪೊಲೀಸರು ಆತಂಕಕ್ಕೆ ಒಳಗಾಗಿದ್ದಾರೆ. ವಿಟ್ಲ ಠಾಣೆಯ ಸೋಂಕಿತ ಸಿಬ್ಬಂದಿ ಪುತ್ತೂರಿನ ನಗರ ಠಾಣೆ, ಮಹಿಳಾ ಠಾಣೆ ಹಾಗೂ ಸಂಪ್ಯ ಠಾಣೆಗೆ ಭೇಟಿ ನೀಡಿದ್ದರು ಎಂಬುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈತನ ಸಂಪರ್ಕಕ್ಕೆ ಬಂದಿದ್ದ ಸಂಪ್ಯ ಠಾಣೆಯ ಓರ್ವ ಸಿಬಂದಿ ಹಾಗೂ ಇತರೆ ಠಾಣೆಗಳ ಒಟ್ಟು 8 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.
ಕರ್ತವ್ಯ ನಿರತ ಕೆಲವು ಪೊಲೀಸರಲ್ಲಿ ಜ್ವರದ ಲಕ್ಷಣಗಳು ಕಂಡುಬಂದಿದ್ದವು. ತಕ್ಷಣವೇ ಅವರನ್ನು ಪರೀಕ್ಷೆ ನಡೆಸಿ ಕ್ವಾರಂಟೈನ್ ಮಾಡಲಾಗಿತ್ತು. ಎರಡನೇ ದಿನದಲ್ಲಿ ಆ ಪೊಲೀಸರು ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಇತರ ಠಾಣೆಗಳ ಸಿಬ್ಬಂದಿಗೆ ಆತಂಕ ಶುರುವಾಯಿತು. ಆದರೆ, ಸಿಬ್ಬಂದಿ ವರದಿ ನೆಗೆಟಿವ್ ಬಂದಿದ್ದರಿಂದ ಕರ್ತವ್ಯಕ್ಕೆ ಮರಳಿದ್ದರು ಎಂಬುದು ಬಳಿಕ ತಿಳಿದುಬಂತು.
ಕೊರೊನಾ ಮೊದಲ ಹಂತದ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ ಎರಡನೇ ಹಂತದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಪ್ರಕರಣಗಳಿವೆ. ಉಪ್ಪಿನಂಗಡಿಯಲ್ಲಿ ಎರಡನೇ ಹಂತದ ಪರೀಕ್ಷೆಯಲ್ಲಿ ಕೊರೊನಾ ದೃಢಗೊಂಡಿತ್ತು. ಹೀಗಾಗಿ, ಈ 8 ಮಂದಿ ಪೊಲೀಸರನ್ನು ಎರಡನೇ ಪರೀಕ್ಷೆ ತನಕ ಕ್ವಾರಂಟೈನ್‌ಗೆ ಒಳಪಡಿಸಬೇಕಿತ್ತು ಎಂಬ ಅಭಿಪ್ರಾಯ ಪೊಲೀಸ್ ಕುಟುಂಬಸ್ಥರಿಂದ ಕೇಳಿಬಂದಿದೆ.