ಕಾರವಾರ/ಮಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜನಪ್ರಿಯ ಕಲೆ ಅಂದರೆ ಅದು ಯಕ್ಷಗಾನ. ಅದೇಷ್ಟೊ ಕಲಾವಿದರು ಯಕ್ಷಗಾನವನ್ನೆ ಉಸಿರಾಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇದೀಗ ಮಹಾಮಾರಿ ಕೊರೊನಾ ವೈರಸ್ ಅವರ ಕಲಾಭಿನಯನಕ್ಕೂ ಕೊಳ್ಳಿ ಇಟ್ಟಿದ್ದು, ಕಲೆಯನ್ನೇ ನಂಬಿ ಬದುಕುತ್ತಿದ್ದವರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಜಗತ್ತಿನಲ್ಲಿ ರೌದ್ರ ನರ್ತನ ಆರಂಭಿಸಿರುವ ಕೊರೊನಾ ರಾಜ್ಯದಲ್ಲಿಯೂ ದಿನೇ ದಿನೇ ಹೆಚ್ಚಾಗತೊಡಗಿದೆ. ವೈರಸ್ ಹಾವಳಿಯಿಂದಾಗಿ ಅದೆಷ್ಟೊ ಜನರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಬಹಳಷ್ಟು ಕುಟುಂಬಗಳು ಬೀದಿಗೆ ಬಿದ್ದಿವೆ. ಇದೇ ಪರಿಸ್ಥಿತಿ ಇದೀಗ ಕಲೆಯನ್ನೆ ಕಾಯಕವನ್ನಾಗಿಸಿಕೊಂಡ ಯಕ್ಷಗಾನ ಕಲಾವಿದರಿಗೂ ತಟ್ಟಿದೆ. ಉತ್ತರ ಕನ್ನಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅದೆಷ್ಟೊ ಕಲಾವಿದರು ಯಕ್ಷಗಾನವನ್ನೇ ನಂಬಿ ಬದುಕುತ್ತಿದ್ದು, ಹೊಟ್ಟೆಪಾಡಿಗಾಗಿ ಊರೂರು ಸುತ್ತುತ್ತಿದ್ದವರು ಕೊರೊನಾ ಹಾಗೂ ಲಾಕ್ಡೌನ್ ಕಾರಣಕ್ಕೆ ಮನೆಯಲ್ಲಿಯೇ ಉಳಿಯುವಂತಾಗಿದೆ.
ಸಾಮಾನ್ಯವಾಗಿ ಯಕ್ಷಗಾನ ಮೇಳಗಳು ವರ್ಷದಲ್ಲಿ ಆರೇಳು ತಿಂಗಳು ಮಾತ್ರ ನಡೆಯುತ್ತವೆ. ಮಳೆಗಾಲ ಪ್ರಾರಂಭವಾದ ಬಳಿಕ ಬೆಂಗಳೂರು, ಮುಂಬೈ ಹೀಗೆ ಹೊರ ರಾಜ್ಯಗಳಲ್ಲಿ ಕೆಲವೇ ಕೆಲವು ಆಟಗಳು ನಡೆಯುತ್ತವೆ. ಆದರೆ ಬಹುತೇಕ ಯಕ್ಷಗಾನ ಕಲಾವಿದರ ದುಡಿಮೆ ಆರು ತಿಂಗಳು ಮಾತ್ರ. ಇದೆ ದುಡಿಮೆಯನ್ನು ನಂಬಿ ವರ್ಷದುದ್ದಕ್ಕೂ ಬದುಕಬೇಕು. ಆದರೆ ಈ ಬಾರಿ ಯಕ್ಷಗಾನ ಮೇಳಗಳು ನಡೆಯುವಾಗಲೇ ಕೊರೊನಾ ಅಡ್ಡಿಯಾಗಿದೆ. ಜನ ಗುಂಪುಗೂಡಬಾರದೆಂಬ ಕಾರಣಕ್ಕೆ ಕಲೆಯನ್ನೇ ಉಸಿರಾಗಿಸಿಕೊಂಡವರ ಬದುಕಿಗೆ ತಣ್ಣೀರೆರಚಿದಂತಾಗಿದೆ. ಈಗಾಗಲೇ ಕೆಲ ಮೇಳದವರು ಕಲಾವಿದರ ಸಹಾಯಕ್ಕೆ ನಿಂತಿದ್ದಾರೆ. ಜನರು ಕೂಡ ಈವರೆಗೆ ತೋರಿದ ಪ್ರೀತಿ ಪ್ರೋತ್ಸಾಹ ತೋರುವ ಭರವಸೆ ಇದೆ ಎನ್ನುತ್ತಾರೆ ಹಿರಿಯ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಕೂರು ಕೃಷ್ಣಯಾಜಿ.
ಪದ್ಮಶ್ರೀ ಪುರಸ್ಕೃತ ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆಯವರಂತಹ ಅದೆಷ್ಟೊ ಯಕ್ಷ ದಿಗ್ಗಜರು ಯಕ್ಷಗಾನವನ್ನೇ ಉಸಿರಾಗಿಸಿಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ತಿರುಗಾಟದ ಯಾವುದೇ ಮೇಳಗಳು ಇಲ್ಲ. ಇದ್ದ ಕೆಲವು ಮೇಳಗಳು ಬಂದ್ ಆಗಿವೆ. ಇದರಿಂದ ಉಡುಪಿ, ಮಂಗಳೂರು ಭಾಗದ ಸಾಲಿಗ್ರಾಮ, ಪೆರ್ಡೂರು, ಡೆರೆ, ಸಿಗಂದೂರು, ಹಾಲಾಡಿ ಇಂತಹ ಮೇಳಗಳಲ್ಲಿ ಜಿಲ್ಲೆಯ ಕಲಾವಿದರು ಸೇರಿಕೊಂಡು ತಮ್ಮ ಕಲೆಯನ್ನು ಹೊರಹಾಕುತ್ತಿದ್ದಾರೆ. ಕೆಲವರಿಗೆ ಇದು ಕಲಾಭಿಮಾನದ ಸಂಕೇತವಾದರೇ ಇನ್ನು ಕೆಲವರಿಗೆ ಯಕ್ಷಗಾನವೇ ಜೀವನಾಧಾರವಾಗಿದೆ.