ಮಂಗಳೂರು: ನಗರದ ತಣ್ಣೀರು ಬಾವಿ ಪ್ರದೇಶದಲ್ಲಿ 3,200 ಕೋಟಿ ರೂ. ವೆಚ್ಚದಲ್ಲಿ ಗ್ಯಾಸ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಯಿಂದ ಇಲ್ಲಿನ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಖಾತೆ ಸಚಿವ ಸರ್ಬಾನಂದ್ ಸೊನೊವಾಲ್ ಹೇಳಿದರು.
ನಗರದ ಎನ್ಎಂಪಿಟಿಯಿಂದ ನಿರ್ಮಾಣಗೊಂಡಿರುವ ವ್ಯಾಪಾರಾಭಿವೃದ್ಧಿ ಕಟ್ಟಡದ ಲೋಕಾರ್ಪಣೆ ಹಾಗೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎನ್ಎಂಪಿಟಿ ಅಭಿವೃದ್ಧಿಗೆ ಬಹಳಷ್ಟು ಅವಕಾಶಗಳಿವೆ. ಆದ್ದರಿಂದ ಈ ಬಂದರನ್ನು ವಿಶ್ವ ದರ್ಜೆಗೇರಿಸುವ ಗುರಿ ನಮ್ಮ ಮುಂದಿದೆ. ಆದ್ದರಿಂದ ಸುಧಾರಣೆಯ ಅಂಶಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಸಚಿವ ಸರ್ಬಾನಂದ್ ಸೊನೊವಾಲ್ ಯು.ಎಸ್.ಮಲ್ಯ ಪ್ರವೇಶದ್ವಾರವನ್ನು ಚತುಷ್ಪಥವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಇದರಿಂದ ಟ್ರಕ್ ಸಂಚಾರಕ್ಕೆ ಅನುಕೂಲವಾಗಲಿದ್ದು, ಲೋಡಿಂಗ್, ಅನ್ ಲೋಡಿಂಗ್ ಸಮಯ ಮಿತವ್ಯಯವಾಗಲಿದೆ. ಜತೆಗೆ ಅತ್ಯುತ್ತಮ ಟರ್ಮಿನಲ್ ನಿರ್ಮಾಣದಿಂದ ಎನ್ಎಂಪಿಟಿಯ ಸೌಲಭ್ಯಗಳಿಗೆ ಹೊಸ ಆಯಾಮ ದೊರಕಲಿದೆ. ಬಂದರಿನ ಸಾಮರ್ಥ್ಯವೂ ಹೆಚ್ಚಾಗಲಿದೆ ಎಂದು ಸಚಿವರು ಹೇಳಿದರು.
ಮಂಗಳೂರು ಬಂದರು ಪಕ್ಕದಲ್ಲಿಯೇ ಫಲ್ಗುಣಿ ನದಿ ಹರಿಯುತ್ತಿರುವುದರಿಂದ ಪ್ರವಾಸೋದ್ಯಮಕ್ಕೂ ವಿಪುಲ ಅವಕಾಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಇದಕ್ಕೆ ಕೈ ಜೋಡಿಸಲಿದೆ. ಕುಳಾಯಿ ಬಂದರು ಅಭಿವೃದ್ಧಿಪಡಿಸುವುದಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನೆಡೆ ಉಂಟಾದರೂ, ಅದರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈ ಕಾರ್ಯಕ್ಕೆ ಸ್ಥಳೀಯರ ಸಹಕಾರವೂ ಅಗತ್ಯ ಎಂದು ಸರ್ಬಾನಂದ್ ಸೊನೊವಾಲ್ ಹೇಳಿದರು.
ಈ ಸಂದರ್ಭ ಅವರು 3.22 ಕೋಟಿ ರೂ. ವೆಚ್ಚದಲ್ಲಿ ಎನ್ಎಂಪಿಟಿಯ ಯುಎಸ್ ಮಲ್ಯ ಗೇಟ್ ನ ನವೀಕರಣ ಕಾಮಗಾರಿಗೆ ಶಿಲಾನ್ಯಾಸ, 5ಕೋಟಿ ರೂ. ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ಎಸಿಐಡಿಇ ಯೋಜನೆಯಡಿ ಬಂದರಿನಲ್ಲಿ ರಫ್ತು ಮತ್ತು ಪರೀಕ್ಷಾ ಕೇಂದ್ರಕ್ಕಾಗಿ ವ್ಯಾಪಾರ ಅಭಿವೃದ್ಧಿ ಕೇಂದ್ರದ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎನ್ಎಂಪಿಟಿ ಅಧ್ಯಕ್ಷ ಡಾ.ಎ.ವಿ.ರಮಣ, ಮಂಗಳೂರು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಮುಂಡ್ರಾ ಬಂದರಿನಲ್ಲಿ ಹೆರಾಯಿನ್ ಪತ್ತೆ ಪ್ರಕರಣ: ಪ್ರಶ್ನೆಗೆ ಉತ್ತರಿಸದೆ ಹೋದ ಕೇಂದ್ರ ಬಂದರು ಸಚಿವ