ಕರ್ನಾಟಕ

karnataka

ETV Bharat / city

ಬಾಲಕಿ ಮೇಲೆ ನಿರಂತರ ಅತ್ಯಾಚಾರ ಪ್ರಕರಣ - ಅಪರಾಧಿಗೆ 10 ವರ್ಷ ಕಠಿಣ ಸಜೆ - ಮಂಗಳೂರು 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ

ಸೆಷನ್ ಹೆಚ್ಚುವರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ. ರಾಧಾಕೃಷ್ಣ ಅವರು ‌2ನೇ ತ್ವರಿತಗತಿ ವಿಚಾರಣೆ ನಡೆಸಿ, ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಬೆಳ್ತಂಗಡಿ ಬೊಳ್ಳರ ಮಜಲು ಮನೆಯ ಪ್ರಸಾದ್​ಗೆ ಪೋಕ್ಸೋ ಕಾಯಿದೆಯಡಿ 10 ವರ್ಷ ಶಿಕ್ಷೆ ವಿಧಿಸಿದೆ.

District Court
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ

By

Published : Mar 24, 2022, 1:18 PM IST

ಮಂಗಳೂರು: ಸುಮಾರು ಒಂದು ವರ್ಷ ಕಾಲ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಸಜೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಬೊಳ್ಳರ ಮಜಲು ಮನೆಯ ಪ್ರಸಾದ್ (31) ಶಿಕ್ಷೆಗೊಳಗಾದ ಅಪರಾಧಿ.

2018ರ ಜು. 28ರಂದು ಪ್ರಸಾದ್ ಮನೆಗೆ ಆತನ ಸಂಬಂಧಿಕಳೇ ಆಗಿರುವ 17 ವರ್ಷದ ಬಾಲಕಿ ಮನೆ ಕೆಲಸಕ್ಕಾಗಿ ಬಂದಾಗ ಆಕೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದನು. ಆ ಬಳಿಕವು ಬಾಲಕಿಯನ್ನು ನಿರಂತರವಾಗಿ ಅತ್ಯಾಚಾರ ಮಾಡಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿತ್ತು. ಆಕೆ ಪ್ರತಿಭಟಿಸಿದಾಗ ಆತ ಬಾಲಕಿ ಮೇಲೆ ಹಲ್ಲೆ ನಡೆಸಿದ್ದ.

ಈ ವಿಚಾರ ಬಾಲಕಿಯ ತಾಯಿ ಮತ್ತು ಅಣ್ಣನಿಗೆ ಗೊತ್ತಾದ ಬಳಿಕ ಮನೆ ಮಂದಿಯ ಸಲಹೆಯಂತೆ ಬಾಲಕಿಯು 2019ರ ಜೂ. 13ರಂದು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿ ಪ್ರಸಾದ್ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣನ್ನು ದಾಖಲಿಸಿ ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ್ ಡಿ. ಮತ್ತು ನಾಗೇಶ್ ಕೆ. ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇದನ್ನು ಓದಿ:ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಕೂದಲೆಳೆ ಅಂತರದಲ್ಲಿ ರಕ್ಷಿಸಿದ ಕಾನ್ಸ್​ಟೇಬಲ್​: ವಿಡಿಯೋ

ಸೆಷನ್ ಹೆಚ್ಚುವರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ. ರಾಧಾಕೃಷ್ಣ ಅವರು ‌2ನೇ ತ್ವರಿತಗತಿ ವಿಚಾರಣೆ ನಡೆಸಿದರು. ಆರೋಪಿ ಮೇಲಿನ ಆರೋಪ ಸಾಬೀತಾಗಿದ್ದು, ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಪೋಕ್ಸೋ ಕಾಯಿದೆಯ 6 ರನ್ವಯ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ 2 ತಿಂಗಳ ಸಜೆ, ಐಪಿಸಿ ಸೆ.506 (ಕೊಲೆ ಬೆದರಿಕೆ) ಅನ್ವಯ 1 ವರ್ಷ ಸಜೆ, ಐಪಿಸಿ ಸೆಕ್ಷನ್ 323 (ಹಲ್ಲೆ) ಅನ್ವಯ 6 ತಿಂಗಳ ಸಜೆ ವಿಧಿಸಲಾಗಿದೆ.

ಈ 3 ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿದೆ. ಬಾಲಕಿಗೆ ಸರ್ಕಾರದ ಸಂತ್ರಸ್ತ ವತಿಯಿಂದ 4 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ದೊರಕಿಸಿ ಕೊಡುವಂತೆಯೂ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ವಾದ ಮಂಡಿಸಿದರು. ಅತ್ಯಾಚಾರ ಮತ್ತು ಸಂಬಂಧಿತ ಪ್ರಕರಣಗಳ ವಿಲೇವಾರಿಗಾಗಿ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯವನ್ನು ಮಂಗಳೂರಿನಲ್ಲಿ ಒಂದು ತಿಂಗಳ ಹಿಂದೆಯಷ್ಟೆ ಆರಂಭಿಸಲಾಗಿದ್ದು, ಈ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ ಆರೋಪಿಗೆ ಶಿಕ್ಷೆಯಾದ ಪ್ರಥಮ ಪ್ರಕರಣ ಇದಾಗಿದೆ.

For All Latest Updates

ABOUT THE AUTHOR

...view details