ಬೆಂಗಳೂರು: ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಸಂಖ್ಯೆ 18ಕ್ಕೆ ಏರಿದೆ.
ನಗರ ಸಶಸ್ತ್ರ ವಿಭಾಗ (ಸಿಎಆರ್) ಬೆಂಗಳೂರು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾನ್‌ಸ್ಟೇಬಲ್ ಮತ್ತು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮುಸ್ತಾಕ್ ಕ್ವಾಟಿ ನಾಯಕ್ ಬಂಧಿತ ಕಾನ್‌ಸ್ಟೇಬಲ್. ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಈತ ಸಿಎಆರ್‌ನಲ್ಲಿ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ವಿಭಾಗದ ಕಂಟ್ರೋಲ್ ವಿಭಾಗದಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಸನಾ ಬೇಡಿ, ಪ್ರಶ್ನೆಪತ್ರಿಕೆಯನ್ನು ವಾಟ್ಸಾಪ್ ಮೂಲಕ ಈತನಿಗೆ ಕಳುಹಿಸಿದ್ದಳು ಎನ್ನಲಾಗ್ತಿದೆ.
ಪ್ರಶ್ನೆಪತ್ರಿಕೆ ವಿಚಾರವಾಗಿಯೇ ಇಬ್ಬರು ಚಾಟ್ ಮಾಡಿಕೊಂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾನ್‌ಸ್ಟೇಬಲ್ ಹಾವೇರಿಯಲ್ಲಿ ನಾಪತ್ತೆಯಾಗಿದ್ದ.
ಕಾನ್ ಸ್ಟೇಬಲ್ ಜೊತೆಗೆ ಕೆಪಿಎಸ್ಸಿ ನೌಕರ ಸಹ ಬಂಧನ
ಪ್ರಕರಣದಲ್ಲಿ ಕಾನ್ ಸ್ಟೇಬಲ್ ಜೊತೆಗೆ ಕೆಪಿಎಸ್ಸಿ ನೌಕರನ ಬಂಧನವೂ ಆಗಿದೆ. ಬಂಧನಕ್ಕೊಳಗಾಗಿರುವ ಬಾಗಲಕೋಟೆ ಮೂಲದ ರಮೇಶ್ ಹೆರಕಲ್ ತನ್ನ ರೂಮ್ ಮೇಟ್ ಆಗಿರುವ ಹಾಗೂ ಕೆಪಿಎಸ್ಸಿ ಅಕೌಂಟ್ಟೆಂಟ್ ಆಗಿದ್ದ ಬಸವರಾಜ್ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಣ ವಿಭಾಗದಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಸನಾ ಬೇಡಿ, ಸ್ನೇಹಿತ ರಮೇಶ್ಗೆ ಪೆನ್ಡ್ರೈವ್ ನೀಡಿ ಪ್ರಶ್ನೆಪತ್ರಿಕೆ ಸೋರಿಕೆಗೆ ಸಹಕರಿಸಿದ್ದಳು. ಈತ ಇದೇ ಪ್ರಶ್ನೆಪತ್ರಿಕೆಯನ್ನು ಬಸವರಾಜ್‌ಗೆ ಕಳುಹಿಸಿದ್ದಾನೆ. ಬಳಿಕ ಈತ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.