ಮಂಗಳೂರು:ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಅವರಿಗೆ ವಾಯ್ಸ್ ಇಲ್ಲ. ಅವರು ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ್ ಆರೋಪಿಸಿದ್ದಾರೆ.
ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ: ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ್ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಲಪತಿಗಳಲ್ಲಿ ಅಧಿಕಾರವಿಲ್ಲ. ಅದನ್ನು ನಿಭಾಯಿಸುವವರು ಸಿಂಡಿಕೇಟ್ ಸದಸ್ಯರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಮಂಗಳೂರು ವಿವಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ತುಳು ಉಪಾನ್ಯಾಸದ ವೆಬಿನಾರ್ ಮಾಡಲು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿಂದೆ ಮಂಗಳೂರು ವಿವಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಹಾಗೂ ಈಗ ಜೆಎನ್ಯುವಿನಲ್ಲಿ ಉಪನ್ಯಾಸಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರನ್ನು ಕರೆಸಲಾಗಿತ್ತು.
ಆದರೆ, ಅವರು ಕಾರ್ಯಕ್ರಮ ನಡೆಸಲು ಬಂದ ಸಂದರ್ಭದಲ್ಲಿ ಏಕಾಏಕಿ ಕಾರ್ಯಕ್ರಮವನ್ನು ರದ್ದುಪಡಿಸಲಾಗುತ್ತದೆ. ಮಾತು-ಮಾತಿಗೂ ಹೋರಾಟ ಮಾಡುವ ಎಬಿವಿಪಿ ಈ ಸಂದರ್ಭ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಅಕ್ರಮಗಳ ಬಗ್ಗೆ ಎಬಿವಿಪಿಯವರು ಸಾಕಷ್ಟು ದನಿ ಎತ್ತುತ್ತಾರೆ. ಹಾಗಾದರೆ ಈ ಬಗ್ಗೆ ಯಾಕೆ ಅವರು ಮಾತನಾಡುತ್ತಿಲ್ಲ. ಈ ಬಗ್ಗೆ ಹೋರಾಟ ಮಾಡುವುದಿದ್ದಲ್ಲಿ ಎನ್ಎಸ್ಯುಐ ಹಾಗೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆ ನಿಮ್ಮೊಂದಿಗೆ ಸೇರಿ ಹೋರಾಟ ಮಾಡಲು ತಯಾರಾಗಿದೆ.
ಸಿಂಡಿಕೇಟ್ ಸದಸ್ಯರೋರ್ವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿ ವ್ಯಕ್ತಿಯೋರ್ವರಿಗೆ ಗೌರವ ಡಾಕ್ಟರೇಟ್ ಕೊಡಿಸಿ ನಗರದ ಆಯಕಟ್ಟಿನ ಜಾಗದಲ್ಲಿ ಅಪಾರ್ಟ್ಮೆಂಟ್ವೊಂದನ್ನ ಪಡೆದುಕೊಂಡಿದ್ದಾರೆ. ಮತ್ತೋರ್ವ ಸಿಂಡಿಕೇಟ್ ಸದಸ್ಯರು ಅಕ್ರಮವಾಗಿ ಎರಡನೇ ಬಾರಿಗೆ ಸಿಂಡಿಕೇಟ್ ಸದಸ್ಯರಾಗಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣವಿರುವ ಓರ್ವರು ಸಿಂಡಿಕೇಟ್ ಸದಸ್ಯರಾಗಿದ್ದಾರೆ. ಇದು ನಮ್ಮ ಮಂಗಳೂರಿಗೆ ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದರು.
ಅಲ್ಲದೆ, ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಉದಯ ಕುಮಾರ್ ಇರ್ವತ್ತೂರು ಅವರನ್ನು ಅವರ ಸ್ಥಾನದಿಂದ ಪದಚ್ಯುತಿಗೊಳಿಸಲಾಯಿತು. ಅವರ ಸೈದ್ಧಾಂತಿಕ ವಿಚಾರ ಹೊಂದಾಣಿಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಮನೆಗೆ ಕಳುಹಿಸಲಾಯಿತು. ಮೊನ್ನೆಯ ವೆಬಿನಾರ್ನ್ನು ಕೂಡಾ ಇದೇ ವಿಚಾರಕ್ಕೆ ಅಂದರೆ ವೆಬಿನಾರ್ಗೆ ಅತಿಥಿಯಾಗಿ ಬಂದಿರುವವರು ಎಡಚಿಂತಕರು ಎಂಬ ಕಾರಣಕ್ಕೆ ಏಕಾಏಕಿ ಸ್ಥಗಿತಗೊಳಿಸಲಾಗಿದೆ.
ಇದು ಸಿಂಡಿಕೇಟ್ ಸದಸ್ಯರ ಗಮನಕ್ಕೆ ಬಂದೇ ಬರುತ್ತದೆ. ಅವರದೇ ಎಬಿವಿಪಿಯವರು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅವರೇ ಬಂದು ಇದನ್ನು ನಿಲ್ಲಿಸಿದ್ದಾರೆ. ಹಾಗಾದರೆ ಎಬಿವಿಪಿಗೆ ಪ್ರಚಾರ ಕೊಡಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆಯೇ ಎಂದರು.