ಬಂಟ್ವಾಳ: ಉತ್ತರ ಪ್ರದೇಶದಲ್ಲಿ ಗಲಭೆಕೋರರು, ಅಶಾಂತಿ ಸೃಷ್ಟಿಸುವವರನ್ನು ಮಟ್ಟ ಹಾಕಲು ಯೋಗಿ ಆದಿತ್ಯನಾಥ್ ಆರಂಭಿಸಿರುವ 'ಬುಲ್ಡೋಜರ್ ಮಾದರಿ' ಕಾರ್ಯಾಚರಣೆಯನ್ನು ಕರ್ನಾಟಕದಲ್ಲೂ ತರಲು ಸಿದ್ಧರಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬಿಜೆಪಿಯ ಬಂಟ್ವಾಳ ಮಹಿಳಾ ಮೋರ್ಚಾ ವತಿಯಿಂದ ನಾರಿ ಸಮ್ಮಾನ್ ದೇಶದ ಅಭಿಯಾನದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಜಾತಿ, ಧರ್ಮ ತಾರತಮ್ಯ ಮಾಡದೆ ತಂದ ಯೋಜನೆಗಳ ಫಲಾನುಭವಿಗಳು ಎಲ್ಲ ಧರ್ಮ, ಜಾತಿಯವರೂ ಇದ್ದಾರೆ. ಸವಲತ್ತು ಪಡೆಯುವಾಗ ನೆನಪಾಗದೆ, ಕೇವಲ ಮೋದಿ ಅವರನ್ನು ದ್ವೇಷ ಮಾಡುತ್ತಾ, ಬಿಜೆಪಿಯನ್ನು ಕೋಮುವಾದಿಗಳು ಎಂದು ಜರೆಯುತ್ತಿರುವುದು ಸರಿಯಲ್ಲ. ಇವೆಲ್ಲವನ್ನೂ ಲೆಕ್ಕಿಸದೆ ಬಿಜೆಪಿ ಮುನ್ನಡೆಯುತ್ತಿದ್ದು, ವಿಶ್ವಮಾನ್ಯರಾಗಿ ನರೇಂದ್ರ ಮೋದಿ ಭಾರತದ ಹಿರಿಮೆಯನ್ನು ಎತ್ತಿಹಿಡಿದಿದ್ದಾರೆ ಎಂದರು.
ಬಿಜೆಪಿಯಲ್ಲಿ ಭಾರತ್ ಮಾತಾ ಕೀ ಜೈ ಎಂದರೆ, ಇತರ ಪಕ್ಷಗಳಲ್ಲಿ ವ್ಯಕ್ತಿಗೆ ಜೈ ಎನ್ನಲಾಗುತ್ತದೆ. ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್, ಎನ್ಸಿಪಿ, ಜೆಡಿಎಸ್, ಟಿಎಂಸಿ ಸಹಿತ ರಾಜಕೀಯ ಪಕ್ಷಗಳು ಬಿಜೆಪಿ ಮೇಲೆ ವಿನಾ ಕಾರಣ ಕೋಮುವಾದದ ಆರೋಪ ಮಾಡುತ್ತಿವೆ. ಬಿಜೆಪಿ ನೈಜ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದೆ ಎಂದರು. ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.