ಮಂಗಳೂರು:ನಗರದಲ್ಲಿ ಕೊರಗಜ್ಜ ದೈವ ಸೇರಿದಂತೆ ದೈವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದ ಪ್ರಕರಣವನ್ನು ಭೇದಿಸುವುದು ಈ ವರ್ಷದ ಸವಾಲಿನ ಪ್ರಕರಣವಾಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರಗಜ್ಜ ದೇವಸ್ಥಾನ ಮತ್ತು ಇತರ ದೈವಸ್ಥಾನಗಳಲ್ಲಿ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ 5 ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣದ ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ. ಈ ಆರೋಪಿ ದೇವಸ್ಥಾನ, ದರ್ಗಾ ಮತ್ತು ಗುರುಮಂದಿರಗಳಲ್ಲಿ ಇಂತಹ ಕೃತ್ಯ ಎಸಗಿರುವುದನ್ನು ಒಪ್ಪಿದ್ದಾನೆ ಎಂದು ಹೇಳಿದರು.
ಈ ಪ್ರಕರಣ ಭೇದಿಸುವುದು ಸವಾಲಿನದ್ದಾಗಿತ್ತು. ಅದೇ ರೀತಿ ನಾಗಬನದ ನಾಗನಕಲ್ಲುಗಳನ್ನು ಹಾನಿ ಮಾಡಿದ ಪ್ರಕರಣ, ಕಾವೂರು ಚೂರಿ ಇರಿತ ಪ್ರಕರಣದ ಆರೋಪಿ ಬಂಧನ, ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ವಕೀಲ ಕೆ.ಎಸ್.ಎನ್. ರಾಜೇಶ್ ಪ್ರಕರಣ, 24 ಸರಗಳ್ಳತನ ಪ್ರಕರಣ, ಸರಣಿ ದರೋಡೆ ಪ್ರಕರಣವು ಸವಾಲಿನದ್ದಾಗಿತ್ತು ಎಂದು ಅವರು ವಿವರಿಸಿದರು.
ಕೊರೊನಾ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ರಸ್ತೆಗಿಳಿದು ಕರ್ತವ್ಯ ನಿರ್ವಹಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಮತ್ತು ಹಿರಿಯ ಟ್ರಾಫಿಕ್ ವಾರ್ಡನ್ವೊಬ್ಬರು ಕೊರೊನಾದಿಂದ ಮೃತಪಟ್ಟಿದ್ದರು. ಕೊರೊನಾ ಭಯದ ನಡುವೆ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸುವ ಕಾರ್ಯ ಸವಾಲಿನದ್ದಾಗಿತ್ತು ಎಂದು ತಿಳಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ, ಕರ್ನಾಟಕ No 1 ಆಗಲಿದೆ: ಸುರ್ಜೆವಾಲಾ ವಿಶ್ವಾಸ