ಕರ್ನಾಟಕ

karnataka

ETV Bharat / city

ಆರ್​ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು! - ಆರ್​ಎಸ್ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು

ತಮ್ಮ ಒಡೆತನದ ಶಿಕ್ಷಣ ಸಂಸ್ಥೆಯ ಕ್ರೀಡೋತ್ಸವದಲ್ಲಿ ಮಕ್ಕಳಿಂದ ಬಾಬರಿ ಮಸೀದಿ ಧ್ವಂಸ ಘಟನೆ ಮರುಸೃಷ್ಟಿ ಮಾಡಿಸಿದ್ದರ ವಿರುದ್ಧ ಆರ್​ಎಸ್ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಲ್ಕಡ್ಕ ಪ್ರಭಾಕರ ಭಟ್,  RSS leader Kalladka Prabhakar Bhat
ಕಲ್ಕಡ್ಕ ಪ್ರಭಾಕರ ಭಟ್

By

Published : Dec 17, 2019, 2:59 PM IST

Updated : Dec 17, 2019, 4:51 PM IST

ಮಂಗಳೂರು:ಕಲ್ಲಡ್ಕ ಶ್ರೀರಾಮ ಶಾಲೆಯ ಮಕ್ಕಳ ಕ್ರೀಡೋತ್ಸವದಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆ ಮರುಸೃಷ್ಟಿ ಮಾಡಿರುವುದರ ವಿರುದ್ಧ ಆರ್​ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿಎಫ್ಐ ಕಲ್ಲಡ್ಕ ವಲಯ ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಎಂಬುವವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಾಗಿದೆ. ಕಲ್ಲಡ್ಕ ಪ್ರಭಾಕರ ಭಟ್, ಶಾಲಾ ಸಂಚಾಲಕ ನಾರಾಯಣ ಸೋಮಯಾಜಿ, ವಸಂತ ಮಾಧವ, ಚೆನ್ನಪ್ಪ ಕೋಟ್ಯಾನ್ ಮತ್ತು ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ದೂರು ಪ್ರತಿ

ದ‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಆದಿತ್ಯವಾರ ನಡೆದ ಶಾಲಾ ಮಕ್ಕಳ ವಾರ್ಷಿಕ ಕ್ರೀಡಾಕೂಟದಲ್ಲಿ ಈ ಘಟನೆ ನಡೆದಿದ್ದು ಬಾಬರಿ ಮಸೀದಿ ಕೆಡವಿದ ದೃಶ್ಯವನ್ನು ವಿದ್ಯಾರ್ಥಿಗಳು ಮರುಸೃಷ್ಟಿಸಿದ್ದರು. ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆಯ ಶ್ರೀರಾಮ ವಿದ್ಯಾಕೇಂದ್ರದ ಈ ಕ್ರೀಡೋತ್ಸವದಲ್ಲಿ ಪುದುಚೇರಿ ಉಪ ರಾಜ್ಯಪಾಲೆ ಕಿರಣ್ ಬೇಡಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಎಸಿಬಿ ಐಜಿ ಚಂದ್ರಶೇಖರ್, ದ‌.ಕ ಜಿಲ್ಲಾ ಎಸ್ಪಿ ಲಕ್ಷ್ನೀಪ್ರಸಾದ್ ಸೇರಿ ಅನೇಕ‌ ಗಣ್ಯರು ಹಾಜರಿದ್ದರು.

ಬಾಬರಿ ಕಟ್ಟಡ ಕೆಡವಿರೋದು ಐತಿಹಾಸಿಕ ಘಟನೆ: ಇದನ್ನು ತೋರಿಸೋದರಲ್ಲಿ ತಪ್ಪೇನಿದೆ?

ಘಟನೆ ವಿವಾದಕ್ಕೀಡಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್, ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳ ಕ್ರೀಡೋತ್ಸವದ ಒಂದು ತುಣುಕನ್ನು ಇರಿಸಿ ಕೋಮು ಭಾವನೆಯನ್ನು ಪ್ರಚೋದಿಸುವ ಕೆಲಸವಾಗುತ್ತಿದೆ. ಬಾಬರಿ ಕಟ್ಟಡ ಕೆಡವಿ ಹಾಕೋದು ಐತಿಹಾಸಿಕ ಘಟನೆ. ಇದನ್ನು ತೋರಿಸೋದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ.

ನಮ್ಮ ಶಾಲೆಯ ಕ್ರೀಡೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಬರಿ ಕಟ್ಟಡವನ್ನು ಕೆಡವಿ ಹಾಕುವ ದೃಶ್ಯವಿತ್ತು. ಆದರೆ ಪ್ರತೀ ವರ್ಷ ಯಾವ ಪ್ರಮುಖ ಘಟನೆಗಳು ನಡೆಯುತ್ತವೆಯೋ ಅದನ್ನು ನಮ್ಮ ಶಾಲೆಯಲ್ಲಿ ತೋರಿಸಲಾಗುತ್ತದೆ ಎಂದು ಹೇಳಿದರು.

ಕಲ್ಕಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ

ಕಳೆದ ವರ್ಷ ಸರ್ಜಿಕಲ್ ಸ್ಟ್ರೈಕ್, ಹಿಂದಿನ ವರ್ಷ ಮಂಗಳಯಾನ, ಅದರ ಹಿಂದಿನ ವರ್ಷ ಅಫ್ಜಲ್ ಗುರು, ಕಸಬ್ ರನ್ನು ನೇಣಿಗೆ ಹಾಕಿದ ದೃಶ್ಯವನ್ನು ತೋರಿಸಲಾಗಿತ್ತು. ಈ ಬಾರಿ ರಾಮ ಜನ್ಮಭೂಮಿಯೇ ಪ್ರಮುಖ ವಿಷಯವಾಗಿರೋದರಿಂದ ಅದನ್ನು ಮಕ್ಕಳಿಗೆ ತೋರಿಸುವಂತಹ ಪ್ರಯತ್ನ ಮಾಡಿದ್ದಾರೆ.

ರಾಮಜನ್ಮ ಭೂಮಿ ವಿವಾದ ಬಹಳಷ್ಟು ಹಿಂದಿನ ಕಾಲದ್ದಾದರೂ ಇತ್ತೀಚಿನ 50-60 ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಯನ್ನು ನಾಲ್ಕು ಹಂತಗಳಲ್ಲಿ ತೋರಿಸಲಾಗಿದೆ. ಒಂದನೇಯದ್ದು ಅಡ್ವಾಣಿಯವರ ರಥಯಾತ್ರೆ, ಎರಡನೆಯದ್ದು ರಾಮಶಿಲಾ ಪೂಜೆ, ಮೂರನೆಯದ್ದು ಹಿರಿಯರು ಬೇಡವೆಂದರೂ ಉದ್ರಿಕ್ತ ಜನರಿಂದ ಬಾಬರಿ ಕಟ್ಟಡ ಕೆಡವಿ ಹಾಕುವ ದೃಶ್ಯ, ನಾಲ್ಕನೆಯದ್ದು ಐದು ಜನ ನ್ಯಾಯಾಧೀಶರಿಂದ ಐತಿಹಾಸಿಕ ತೀರ್ಪು. ಇದು ಕೋಮುವಾದಿಯಾಗಿರೋದು ಹೇಗೆ. ಯಾವುದೇ ಜಾತಿ ಅಥವಾ ಮತದ ವಿಚಾರ ಆಗಿಲ್ಲ. ಇನ್ನೊಂದು ಜಾತಿಯವರನ್ನು ತೋರಿಸಿ ಅಪಮಾನಿಸುವ ಕಾರ್ಯ ಆಗಿಲ್ಲ ಎಂದು ಹೇಳಿದರು.

ನಾವು ಈ ಘಟನೆಯನ್ನು ಸಮರ್ಥನೆ ಮಾಡೋದಿಲ್ಲ. ಆದರೆ ಇದೊಂದು ಐತಿಹಾಸಿಕ ಘಟನೆ ಎಂಬ ಸಮಾಧಾನ ಇದೆ. ಪ್ರತಿಯೊಂದು ಇಂತಹ ಘಟನೆಗಳನ್ನು ಮುಂದಿನ ಪೀಳಿಗೆಗೆ ತೋರಿಸುವ ಅಗತ್ಯ ಇದೆ. ಆ ದೃಷ್ಟಿಯಿಂದ ಶ್ರೀ ರಾಮ ವಿದ್ಯಾಕೇಂದ್ರದ ಮಕ್ಕಳು ಘಟನೆ ಏನಿದೆಯೋ ಅಷ್ಟನ್ನು ಮಾತ್ರ ತೋರಿಸಿದ್ದಾರೆ. ಇನ್ಯಾವುದೇ ವಿಷಯವನ್ನು ಪ್ರಚೋದಿಸುವ ಕಾರ್ಯ ಮಾಡಲಿಲ್ಲ. ಆದರೆ ಈಗ ಈ ದೃಶ್ಯವನ್ನು ಹಿಡಿದುಕೊಂಡು ಯಾರು ಮಾತನಾಡುತ್ತಿದ್ದಾರೋ ಅವರು ಹಿಂದೂ ಮತ್ತು ಮುಸ್ಲಿಮರ ನಡುವೆ ಅಂತರ ಸೃಷ್ಟಿ ಮಾಡುವ ಕಾರ್ಯ ನಡೆಸುತ್ತಿದ್ದಾರೆ. ನಮ್ಮಲ್ಲಿ ಮುಸಲ್ಮಾನರು ವಿರೋಧಿಗಳಲ್ಲ. ಅಬ್ದುಲ್ ಕಲಾಂ, ಜಾರ್ಜ್ ಫರ್ನಾಂಡೀಸ್​ರಂತವರು ನಮಗೆ ಆಗುತ್ತಾರೆ. ಅಫ್ಝಲ್ ಗುರು, ಕಸಬ್ ರಂತವರು ಆಗೋದಿಲ್ಲ, ಪಾಕಿಸ್ತಾನ , ಬಾಂಗ್ಲಾ ಪರವಾಗಿ ಮಾತನಾಡುವವರು ನಮಗೆ ಬೇಡ‌. ಮೊನ್ನೆ ಕಾರ್ಯಕ್ರಮದಲ್ಲಿದ್ದ ಕಿರಣ್ ಬೇಡಿಯವರು ನಮ್ಮ ಮಕ್ಕಳ ಪ್ರತಿಭೆಯನ್ನು ಮೆಚ್ಚಿ ಜನವರಿ 26 ಕ್ಕೆ ದೆಹಲಿಯ ಕೆಂಪುಕೋಟೆಯಲ್ಲಿ ಕಾರ್ಯಕ್ರಮ ನೀಡುವಂತೆಯೂ ಹೇಳಿದ್ದಾರೆ. ಅದರ ಮಧ್ಯದಲ್ಲಿ ಯಾವುದೋ ಒಂದು ದೃಶ್ಯವನ್ನು ಹಿಡಿದು ಹಿಂದೂ-ಮುಸ್ಲಿಮರ ಮಧ್ಯೆ ಕೋಮು ಭಾವನೆ ಬೆಳೆಸುವಂತಹವರಿಗೆ ನಮ್ಮ ಧಿಕ್ಕಾರವಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

Last Updated : Dec 17, 2019, 4:51 PM IST

ABOUT THE AUTHOR

...view details