ಮಂಗಳೂರು: ಆರು ತಿಂಗಳ ಬಳಿಕ ಮಂಗಳೂರು ಮನಪಾ ಪರಿಷತ್ತಿನ ಸಾಮಾನ್ಯ ಸಭೆ ನಡೆದಿದ್ದರೂ ಸಹ ಪ್ರತಿಪಕ್ಷ ನಾಯಕರಿಗೆ ಮಾತ್ರ ಮಾತನಾಡಲು ಅವಕಾಶ ನೀಡಿ, ಉಳಿದ ಸದಸ್ಯರ ಹಕ್ಕು ಮೊಟಕುಗೊಳಿಸಲಾಗಿದೆ ಎಂಬ ಆರೋಪ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ಮಹಾನಗರ ಪಾಲಿಕೆಯ ಪರಿಷತ್ತಿನ ಸಾಮಾನ್ಯ ಸಭೆ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಸದಸ್ಯರು, ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಮಾತನಾಡಲು ಅವಕಾಶ ನೀಡದೆ ಕಾನೂನಿನ ಉಲ್ಲಂಘನೆ ಮಾಡಲಾಗಿದೆ ಎಂದು ಮೇಯರ್ ಸದನಕ್ಕಿಳಿದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್, ಆರು ತಿಂಗಳ ಬಳಿಕ ಮಹಾನಗರ ಪಾಲಿಕೆಯ ಪರಿಷತ್ತಿನ ಸಾಮಾನ್ಯ ಸಭೆ ನಡೆಯುತ್ತಿದ್ದು, ಈ ಸಂದರ್ಭ ಸಾಕಷ್ಟು ವಿಷಯಗಳ ಮೇಲೆ ಚರ್ಚೆ ನಡೆಸಬೇಕಿದೆ. ಆದರೆ ಸದಸ್ಯರು ಯಾರಿಗೂ ಚರ್ಚೆಗೆ ಅವಕಾಶ ಕೊಡದೆ ಕಾನೂನನ್ನು ಹತ್ತಿಕ್ಕುವ ಕಾರ್ಯವನ್ನು ಆಡಳಿತ ಪಕ್ಷ ಮಾಡುತ್ತಿದೆ. ಒಂದು ವೇಳೆ ಸದಸ್ಯರಿಗೆ ಮಾತನಾಡಲು ಅವಕಾಶವಿಲ್ಲದಿದ್ದಲ್ಲಿ ಮೇಯರ್ ಸಾಮಾನ್ಯ ಸಭೆಯ ಬದಲಿಗೆ ವಿಶೇಷ ಸಭೆಯನ್ನು ಕರೆಯಬಹುದಿತ್ತು ಎಂದರು.