ಕರ್ನಾಟಕ

karnataka

ETV Bharat / city

ಪ್ರಧಾನಿ ಮೋದಿ ಮತ ಪ್ರಚಾರ: ಮಂಗಳೂರಿನಲ್ಲಿ‌ ಚಪ್ಪರ ಮುಹೂರ್ತ - undefined

ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಪ್ರಯುಕ್ತ ಮಂಗಳೂರಲ್ಲಿ ಚಪ್ಪರ ಮುಹೂರ್ತ. ನೆಹರೂ ಮೈದಾನದಲ್ಲಿ‌ ನಡೆಯುವ ಸಭಾ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರ ಮಂಗಳೂರಿನಲ್ಲಿ‌ ಮತ ಪ್ರಚಾರ ನಡೆಸಲಿರುವ ಮೋದಿ.

ಚಪ್ಪರ ಮುಹೂರ್ತ

By

Published : Apr 6, 2019, 12:38 PM IST

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಪ್ರಯುಕ್ತ ನಗರದ ನೆಹರೂ ಮೈದಾನದಲ್ಲಿ‌ ನಡೆಯುವ ಸಭಾ ಕಾರ್ಯಕ್ರಮಕ್ಕೆ ಇಂದು ಬೆಳಗ್ಗೆ ಧಾರ್ಮಿಕ ವಿಧಿವಿಧಾನದ ಮೂಲಕ ಚಪ್ಪರ ಮುಹೂರ್ತ ನೆರವೇರಿಸಲಾಯಿತು.

ಪ್ರಧಾನಿ‌ ನರೇಂದ್ರ ಮೋದಿಯವರು ಎಪ್ರಿಲ್ 13 ರಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರ ಮಂಗಳೂರಿನಲ್ಲಿ‌ ಮತ ಪ್ರಚಾರ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಆರ್.ಅಶೋಕ್, ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಮತ್ತಿತರ ಗಣ್ಯರು ಸೇರಿ ಚಪ್ಪರ ಮುಹೂರ್ತ ನೆರವೇರಿಸಿದರು.

ಈ ಸಂದರ್ಭ ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಆರ್.ಅಶೋಕ್ ಮಾತನಾಡಿ, ಈ ದೇಶದಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ದ.ಕ., ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರಗಳಲ್ಲಿ ಜಯ ಸಾಧಿಸಬೇಕು. ದ.ಕ.ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರು ಸತತ ಮೂರನೇ ಬಾರಿ ದೊಡ್ಡ ಅಂತರದಲ್ಲಿ ಮತ ಪಡೆದು ಗೆದ್ದು ಬರಬೇಕು ಎನ್ನುವ ದೃಷ್ಟಿಯಲ್ಲಿ ಮೋದಿಯವರು ಇಲ್ಲಿ ಮತಪ್ರಚಾರ ಕೈಗೊಂಡಿದ್ದಾರೆ. ಕರ್ನಾಟಕದಲ್ಲಿ ಆರು ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದಾರೆ. ಚುನಾವಣಾ ಉಸ್ತುವಾರಿಯಾಗಿ ಈ ಕಾರ್ಯಕ್ರಮಗಳನ್ನು‌ ನಾನು ವಹಿಸಿಕೊಂಡಿದ್ದೇನೆ ಎಂದರು.

ಚಪ್ಪರ ಮುಹೂರ್ತ

ಈ ಮತಪ್ರಚಾರ ಯಶಸ್ವಿಯಾಗಿ ಕರ್ನಾಟಕದಲ್ಲಿ 22 ಸ್ಥಾನಗಳಲ್ಲಿ ಗೆದ್ದು ಬರಬೇಕೆಂದು‌‌ ನಮ್ಮ ನಾಯಕರ ಗುರಿ ಇದ್ದು, ಅದನ್ನು ತಲುಪಬೇಕೆಂದು ನರೇಂದ್ರ ಮೋದಿಯವರ ಹವಾ ಮಂಗಳೂರು, ಉಡುಪಿ , ಚಿಕ್ಕಮಗಳೂರಿನಲ್ಲಿ ಬೆಳಗಬೇಕು ಎಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜ್ಯದಲ್ಲಿ ಅತಂತ್ರ ಸರಕಾರವಿದ್ದು, ಗುತ್ತಿಗೆದಾರರ ಮುಖಾಂತರ ಕೋಟ್ಯಂತರ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಐಟಿ ದಾಳಿ ಮೂಲಕ 11 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಯಾವುದೇ ಕಾಮಗಾರಿ ಆಗದೆ, ಕೆಲಸ ಮಾಡದೆ ಬಿಲ್ ಪಾಸ್ ಆದದ್ದು ಈಗ ಜಗಜ್ಜಾಹಿರ ಆಗಿದೆ. ಚುನಾವಣೆಗೋಸ್ಕರ ಹಣ ವಸೂಲಿಯ ದಂಧೆಯಲ್ಲಿ ಈ ಸಮ್ಮಿಶ್ರ ಸರಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂದು ಜನರಿಗೆ ಗೊತ್ತಾಗಿದೆ. ಜನರು ಇದನ್ನು ತಿರಸ್ಕಾರ ಮಾಡಿ, ಈ ಸಲ ನರೇಂದ್ರ ಮೋದಿಯವರ ಅಭಿವೃದ್ಧಿ ಪರವಾದಂತಹ, ದೇಶದ ರಕ್ಷಣೆ ಮಾಡುವಂತಹ ಸುಭದ್ರ ಸರಕಾರ ಬರಲಿದೆ. ಈ ಹಿನ್ನೆಲೆಯಲ್ಲಿ ಈ ಮತಪ್ರಚಾರ ಅಭಿಯಾನವನ್ನು ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿ‌ 1 ಲಕ್ಷಕ್ಕೂ ಅಧಿಕ ಮಂದಿ ಸೇರುವ ಮುಖಾಂತರ ಈ ಮತಪ್ರಚಾರವನ್ನು ಬೆಂಬಲಿಸಿ, ಕರ್ನಾಟಕದ ನಮ್ಮ 22 ಸ್ಥಾನದ ಗುರಿಯನ್ನು ತಲುಪಲು ಸಹಕರಿಸಬೇಕೆಂದು ಜನತೆಯಲ್ಲಿ ನಾನು ಕೇಳಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದರು.

ಪುಲ್ವಾಮ ದಾಳಿಯ ಬಗ್ಗೆ ಕಮಾಂಡರ್ ಮೂಲಕ ತಿಳಿದಿತ್ತು ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಇವೆಲ್ಲಾ ಚುನಾವಣಾ ತಂತ್ರಗಾರಿಕೆ. ಯಾವುದೇ ರಕ್ಷಣಾಧಿಕಾರಿ ದೇಶದ ಭದ್ರತೆಗೆ ಸಂಬಂಧಪಟ್ಟ ಹೇಳಿಕೆಗಳನ್ನು‌ ಹೇಳುವುದಿಲ್ಲ. ಇಂತಹ ಸುಳ್ಳು ಹೇಳಿಕೆಗಳನ್ನು ಹೇಳುವ ಮುಖಾಂತರ ಸೈನಿಕರಿಗೆ ಅಪಮಾನ ಮಾಡುತ್ತಾರೆ. ಇಂತಹ ರಕ್ಷಣಾ ಸುದ್ದಿಗಳನ್ನು‌ ಮುಖ್ಯಮಂತ್ರಿಗಳು ಬಿಟ್ಟುಕೊಡುತ್ತಾರೆ ಎಂದರೆ ಸೈನಿಕರನ್ನು ನಂಬಬೇಕಾ, ಕುಮಾರಸ್ವಾಮಿಯವರನ್ನು ನಂಬಬೇಕಾ ಎಂಬುದನ್ನು ಜನರಿಗೆ ಬಿಟ್ಟುಬಿಡುತ್ತೇನೆ. ಈ ತರಹ ಬೊಗಳೆ ಬಿಡುವುದರಿಂದ ರಾಜ್ಯದ ಜನತೆಯನ್ನು ಮರುಳು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್-ಜೆಡಿಎಸ್ ಒಡಕಿನಿಂದ ಬೀದಿ ಬೀದಿಗಳಲ್ಲಿ ಜಗಳ ನಡೆಯುತ್ತಿದೆ, ಸಂಧಾನ ವಿಫಲವಾಗಿದೆ. ದೇವೇಗೌಡರು ಹೇಳಿದ್ದಾರೆ ಸಿದ್ದರಾಮಯ್ಯ ಬಂದು‌ ಮಂಡ್ಯದಲ್ಲಿ ಏನು ಉಪಯೋಗ ಇಲ್ಲಎಂದು, ಅಂದರೆ ಕೆಲಸಕ್ಕೆ ಬಾರದವರೆಂದು ಅರ್ಥ. ಕುಮಾರಸ್ವಾಮಿ 23 ತಾರೀಕಿನ ನಂತರ ಕಾಂಗ್ರೆಸ್​ನವರಿಗೆ ಏನು ಮಾಡುತ್ತೇನೆ ನೋಡಿ ಎಂದಿದ್ದಾರೆ. ಆದ್ದರಿಂದ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.

For All Latest Updates

TAGGED:

ABOUT THE AUTHOR

...view details