ಮಂಗಳೂರು (ದ.ಕನ್ನಡ):2024ರ ವೇಳೆಗೆ ರಾಜ್ಯದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಅಮೆರಿಕಾದ ರಸ್ತೆಗಳಿಗೆ ಸರಿಸಮಾನವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.
ಸೋಮವಾರದಂದು ನಿತಿನ್ ಗಡ್ಕರಿಯವರು ನಗರದ ಕುಲಶೇಖರದ ಕೋರ್ಡೆಕ್ ಸಭಾಂಗಣದ ಆವರಣದಲ್ಲಿ 3,163 ಕೋಟಿ ರೂ. ವೆಚ್ಚದ 164 ಕಿ.ಮೀ. ಉದ್ದದ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಭಾರತ್ ಮಾಲಾ 2ನೇ ಹಂತದ ಬಳಿಕ ಇದೀಗ ಪರ್ವತ್ ಮಾಲಾ ಯೋಜನೆ ಮೂಲಕ ರೋಪ್ ವೇಯಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ರಸ್ತೆ ಅಭಿವೃದ್ಧಿ ಕುರಿತು ನಿತಿನ್ ಗಡ್ಕರಿ ಮಾತನಾಡಿರುವುದು.. ಶಿರಾಡಿ ಘಾಟ್ ರಸ್ತೆಯಲ್ಲಿ 7 ಸುರಂಗ ಮಾರ್ಗ ಹಾಗೂ 7 ಸೇತುವೆ ಮಾರ್ಗವನ್ನು 14 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಅನುಮೋದನೆ ಪಡೆಯಲಾಗುತ್ತದೆ. ಸುರಂಗ ಮಾರ್ಗ ತಜ್ಞರಿಂದ ಅಧ್ಯಯನ ನಡೆಸಿ ಶೀಘ್ರ ಡಿಪಿಆರ್ ತಯಾರಿಸಿ ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಅನುಮೋದನೆ ದೊರೆತ ತಕ್ಷಣವೇ ಸಿಎಂ ಸಹಕಾರದೊಂದಿಗೆ ಆ ಯೋಜನೆಗೆ ಚಾಲನೆ ಕೊಡಲಾಗುತ್ತದೆ. ಭಾರತ್ ಮಾಲಾ ಯೋಜನೆಯಡಿ 2,000 ಕೋಟಿ ರೂ. ವೆಚ್ಚದಲ್ಲಿ ನವಮಂಗಳೂರು ಬಂದರು, ಕಾರವಾರ ಬಂದರು ಅಭಿವೃದ್ಧಿಗಳಿಗೆ ಚಾಲನೆ ನೀಡಲಾಗುತ್ತದೆ. ಬೆಂಗಳೂರು - ಮಂಗಳೂರು ಸಂಪರ್ಕದ ಶಿರಾಡಿ ಘಾಟ್ನ 26 ಕಿ.ಮೀ. ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ಉಡುಪಿ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಜಟಾಪಟಿ.. ಪ್ರಾಯೋಗಿಕ ಪರೀಕ್ಷೆಗೆ ಪ್ರವೇಶ ನಿರಾಕರಣೆ ಆರೋಪ
ಸುರತ್ಕಲ್ ಎನ್ಐಟಿಕೆ ಬಳಿ ಇರುವ ಟೋಲ್ ಫ್ಲಾಝಾ ರದ್ದುಗೊಳಿಸಲು ಕೆಲವು ಕಾನೂನು ತೊಡಕು ಎದುರಾಗಿದ್ದು, ಈ ಸಮಸ್ಯೆ ಬಗೆಹರಿಸಲು ಶೀಘ್ರ ದೆಹಲಿಯಲ್ಲಿ ಸಭೆ ಕರೆಯಲಾಗುತ್ತದೆ. ಮಂಗಳೂರಿನಲ್ಲಿ ಶೀಘ್ರ ರಿಂಗ್ ರೋಡ್ ನಿರ್ಮಾಣ ಮಾಡಲಾಗುತ್ತದೆ. ನಂತೂರು ಬಳಿ ಮೇಲ್ಸೇತುವೆ ನಿರ್ಮಾಣ ಮಾಡಲು ಶೀಘ್ರ ಅನುಮತಿ ನೀಡುವುದಾಗಿ ಹೇಳಿದರು.