ಮಂಗಳೂರು: ಕೇಂದ್ರದ ಬಿಜೆಪಿ ಸರ್ಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆ ಈ ಅವಧಿಯಲ್ಲಿಯೂ ಮತ್ತೆ ಮುಂದುವರಿದಿದ್ದು, ಈ ಅವಧಿಯ ವಿಲೀನ ಪ್ರಕ್ರಿಯೆಯಲ್ಲಿ ಕರಾವಳಿಯಲ್ಲಿ ಜನ್ಮ ತಳೆದ ಮೂರು ಬ್ಯಾಂಕ್ಗಳು ವಿಲೀನಗೊಳ್ಳಲಿವೆ.
ಕೇಂದ್ರ ಬಿಜೆಪಿ ಸರಕಾರ ಕಳೆದ ಅವಧಿಯಲ್ಲಿ ನಡೆಸಿದ ಬ್ಯಾಂಕ್ ವಿಲೀನ ಪ್ರಕ್ರಿಯೆಯಲ್ಲಿ ಕರಾವಳಿಯ ಪ್ರತಿಷ್ಠಿತ ವಿಜಯ ಬ್ಯಾಂಕ್ ತನ್ನ ಅಸ್ತಿತ್ವ ಕಳೆದುಕೊಂಡು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾಯಿತು. ಈ ಅವಧಿಯಲ್ಲಿ ಮತ್ತೆ ಕರಾವಳಿಯಲ್ಲಿ ಹುಟ್ಟಿದ ಕೆನರಾ ಬ್ಯಾಂಕ್, ಕಾರ್ಪೊರೇಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್ಗಳು ವಿಲೀನಗೊಳ್ಳಲಿವೆ. ಈ ಬ್ಯಾಂಕ್ ವಿಲೀನದ ಸಾಧ್ಯತೆ-ಭಾದ್ಯತೆಗಳ ಬಗ್ಗೆ ಕಾರ್ಪೊರೇಷನ್ ಬ್ಯಾಂಕ್ನ ಕೇಂದ್ರ ಕಚೇರಿಯ ಉದ್ಯೋಗಿ ಹಾಗೂ ಕಾರ್ಪೊರೇಷನ್ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ ತಮ್ಮ ಅಭಿಪ್ರಾಯವನ್ನು ಶುಕ್ರವಾರ ಈಟಿವಿ ಭಾರತ್ನೊಂದಿಗೆ ಹಂಚಿಕೊಂಡಿದ್ದಾರೆ.
ಕಾರ್ಪೊರೇಷನ್ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ ಇಂದಿನ ದಿನ ಬ್ಯಾಂಕ್ ಉದ್ಯೋಗಿಗಳ ಪಾಲಿಗೆ ಕರಾಳದಿನ. ಇಂದು ಕೇಂದ್ರ ಸರ್ಕಾರ ನಾಲ್ಕು ಹಂತದ ವಿಲೀನ ಪ್ರಕ್ರಿಯೆ ಆರಂಭಿಸಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ನಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಬ್ಯಾಂಕ್ ಉದ್ಯೋಗಿಗಳು ಸದಸ್ಯರಾಗಿದ್ದಾರೆ. ನಾವೆಲ್ಲರೂ ಈ ವಿಲೀನ ಪ್ರಕ್ರಿಯೆಯನ್ನು ವಿರೋಧಿಸಿ ಆದಷ್ಟು ಶೀಘ್ರವಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.
ಸಾವರ್ಜನಿಕರಿಗೆ ಮನವರಿಕೆ ಮಾಡಿದ್ದಲ್ಲಿ ಈ ವಿಲೀನ ಪ್ರಕ್ರಿಯೆಯನ್ನು ತಡೆಯಲು ಸಾಧ್ಯವಾಗುತ್ತದೆ. ಕಳೆದ ವರ್ಷ ಕೇಂದ್ರ ಸರ್ಕಾರ ಎಫ್ಆರ್ಡಿಎ ಬಿಲ್ ಪಾಸ್ ಮಾಡಿತು. ಯಾಕೆಂದರೆ ನಷ್ಟದಲ್ಲಿರುವ ಬ್ಯಾಂಕುಗಳನ್ನು ಲಾಭದ ಹಾದಿಗೆ ತರಲು ಜನರ ಲಕ್ಷಗಟ್ಟಲೆ ಕೋಟಿ ರೂ. ಠೇವಣಿಗಳನ್ನು ಹೂಡಿಕೆ ಮಾಡಲು ಕೇಂದ್ರ ಸರಕಾರ ಹುನ್ನಾರ ಮಾಡಿತ್ತು. ಇದರ ವಿರುದ್ಧವಾಗಿ ನಾವು ನಮ್ಮ ಯೂನಿಯನ್ ಮುಖಾಂತರ ಹೋರಾಟ ನಡೆಸಿ ಎಫ್ಆರ್ಡಿಎ ಬಿಲ್ ರದ್ದುಗೊಳ್ಳುವಂತೆ ಮಾಡಿದ್ದೆವು. ಆದ್ದರಿಂದ ನಾವೆಲ್ಲರೂ ಸೇರಿ ಹೋರಾಟ ಮಾಡಿದ್ದಲ್ಲಿ ಈ ವಿಲೀನ ಪ್ರಕ್ರಿಯೆಗೆ ಇತಿಶ್ರೀ ಹಾಡಬಹುದೆಂದು ಅನಿಸುತ್ತದೆ ಎಂದರು..
ಇದು ಬ್ಯಾಂಕ್ಗಳ ಮರ್ಜರ್ ಅಲ್ಲ ಮರ್ಡರ್:
ಕೇಂದ್ರ ಸರ್ಕಾರ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನಮಗೆ ದೊಡ್ಡ ಬ್ಯಾಂಕುಗಳ ಅವಶ್ಯಕತೆ ಇದೆ ಎಂದು ಹೇಳುತ್ತದೆ. ಇದರ ತದ್ವಿರುದ್ಧವಾಗಿ ಸಣ್ಣ ಪುಟ್ಟ ಬ್ಯಾಂಕ್ಗಳನ್ನು ನಡೆಸಲು ಕೇಂದ್ರವೇ ಪರವಾನಿಗೆ ನೀಡುತ್ತಿದೆ. ಈ ಪರವಾನಿಗೆಗಳು ಬಂಡವಾಳ ಶಾಹಿಗಳಿಗೆ ದೊರಕುತ್ತದೆ. ಆದ್ದರಿಂದ ಬಂಡವಾಳ ಶಾಹಿಗಳಿಗೆ ಪೂರಕವಾಗಿ ಈ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ಸತತ ಲಾಭದ ಹಾದಿಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ವಿಲೀನ ಕೇಂದ್ರದ ತಪ್ಪು ನಿರ್ಧಾರ. ವಿಲೀನಗೊಂಡ ಬಳಿಕ ಕಾರ್ಪೊರೇಷನ್ ಬ್ಯಾಂಕ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಆದ್ದರಿಂದ ಇದು ಬ್ಯಾಂಕ್ಗಳ ಮರ್ಜರ್ ಅಲ್ಲ ಮರ್ಡರ್ ಎಂದು ವಿನ್ಸೆಂಟ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.