ಮಂಗಳೂರು: ಏನೇ ಕಾನೂನು ಇದ್ದರೂ, ಎಷ್ಟೇ ಎಚ್ಚರಿಕೆ ನೀಡಿದರೂ ಆಗ್ಗಾಗ್ಗೆ ಕೋಮುದ್ವೇಷ ಹರಡುವ ಕೆಲಸಗಳು ನಡೆಯುತ್ತಿರುತ್ತವೆ. ಇದೀಗ ಮಂಗಳೂರಿನಲ್ಲಿ ಮತ್ತೆ ಇಂತದ್ದೇ ಪ್ರಕರಣ ನಡೆದಿದೆ. ಕೋಮುದ್ವೇಷ ಹರಡುತ್ತಿದ್ದ ವ್ಯಕ್ತಿಯ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಕೋಮುದ್ವೇಷ ಹರಡುತ್ತಿದ್ದವನ ಮೇಲೆ ಕೇಸ್: ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ - ಕೋಮುದ್ವೇಷ ಹರಡುತ್ತಿದ್ದ ಮಂಗಳೂರು ವ್ಯಕ್ತಿ ಮೇಲೆ ಕೇಸ್
ಕೋಮುದ್ವೇಷ ಹರಡುವ ಕಾರ್ಯ ಮಾಡುತ್ತಿದ್ದ ಮಂಗಳೂರಿನ ವ್ಯಕ್ತಿಯೊಬ್ಬರ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಾದ ವ್ಯಕ್ತಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕೋಮುದ್ವೇಷ ಹರಡುವ ಕೃತ್ಯದಲ್ಲಿ ತೊಡಗಿದ್ದ ಎಂದು ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ದಾರೆ. ಮಂಗಳೂರಿನ ವಿಶ್ವ ಎಂಬಾತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈತ ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷ ಹರಡುವ ರೀತಿಯಲ್ಲಿ ಪ್ರಚೋದನಕಾರಿ ಬರಹವನ್ನು ಪೋಸ್ಟ್ ಮಾಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರು ಯಾರಾದರೂ ಕೋಮುದ್ವೇಷ ಹರಡುವ ಕೃತ್ಯದಲ್ಲಿ ತೊಡಗಿದ್ದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದಕ್ಕೂ ಮುನ್ನ ವಾಟ್ಸಾಪ್ನಲ್ಲಿ ಗ್ರೂಪ್ ಮಾಡಿ ಧರ್ಮನಿಂದನೆ ಮಾಡುವ ಮೂಲಕ ಕೋಮುದ್ವೇಷ ಕೆರಳಿಸುವ ಸಂದೇಶ ಹರಡುತ್ತಿದ್ದಾರೆ ಎಂಬ ಆರೋಪದ ಮೇಲೆ ಬಂಟ್ವಾಳದಲ್ಲಿ ಇಬ್ಬರನ್ನು ಬಂಧಿಸಿ ಅವರ ಮೇಲೆ ಕೇಸ್ ದಾಖಲಿಸಲಾಗಿತ್ತು. ಇದು ಕಾನೂನು ಪ್ರಕಾರ ತಪ್ಪು ಎಂದು ತಿಳಿದಿದ್ದರೂ ಕೆಲವರು ತಮ್ಮ ಕೃತ್ಯ ಮುಂದುವರೆಸುತ್ತಿರುವುದು ವಿಪರ್ಯಾಸ.