ಕರ್ನಾಟಕ

karnataka

ETV Bharat / city

ಈತನ ದಾಹಕ್ಕೆ ಬಲಿಯಾದದ್ದು 17ಯುವತಿಯರು: ಕಾಮುಕ ಸೈನೈಡ್ ಮೋಹನ್​ಗೆ ಜು. 18 ರಂದು ಶಿಕ್ಷೆ ಪ್ರಕಟ -

ಯುವತಿಯರ ಸರಣಿ ಹಂತಕನೆಂದೇ ಕುಖ್ಯಾತನಾದ ಸೈನೆಡ್ ಮೋಹನ ಕುಮಾರ್ ಕಾಸರಗೋಡಿನ ಪೈವಳಿಕೆ ಗ್ರಾಮದ 26 ವರ್ಷದ ಯುವತಿ ಪರಿಚಯ ಮಾಡಿಕೊಂಡು, ಆಕೆಯನ್ನು ನಂಬಿಸಿ ಅತ್ಯಾಚಾರಗೈದು ಸೈನೆಡ್ ನೀಡಿ ಕೊಲೆ ಮಾಡಿದ್ದಾನೆ. ಇದೀಗ ನ್ಯಾಯಾಲಯದಲ್ಲಿ ಈತನನ ವಿರುದ್ಧದ ಆರೋಪ ಸಾಬೀತಾಗಿದ್ದು, ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಬೇಕಿದೆ.

ಮಂಗಳೂರು ನ್ಯಾಯಾಲಯ

By

Published : Jul 12, 2019, 11:05 PM IST

Updated : Jul 14, 2019, 6:40 AM IST


ಮಂಗಳೂರು:ಯುವತಿಯರ ಸರಣಿ ಹಂತಕ, ಸೈನೆಡ್ ಮೋಹನ ಕುಮಾರ್ ವಿರುದ್ಧದ 17ನೇ ಯುವತಿಯ ಕೊಲೆ ಪ್ರಕರಣ ಇಂದು ಮಂಗಳೂರು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಜುಲೈ 18ರಂದು ಅಂತಿಮ ವಿಚಾರಣೆ ನಡೆದು, ಅವತ್ತೇ ಅಪರಾಧಿಗೆ ಶಿಕ್ಷೆ ಪ್ರಮಾಣವೂ ಪ್ರಕಟವಾಗಲಿದೆ.

ಪ್ರಕರಣ ವಿವರ:

ಕಾಸರಗೋಡಿನ ಪೈವಳಿಕೆ ಗ್ರಾಮದ 26 ವರ್ಷದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಸೈನೆಡ್ ಮೋಹನ್, ತನ್ನ ಹೆಸರು ಸುಧಾಕರ ಎಂದು ಸುಳ್ಳು ಹೇಳಿದ್ದ. ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಯುವತಿ ನಂಬಿಸಿದ್ದ. ಪೈವಳಿಕೆಯ ಮನೆಯೊಂದರಲ್ಲಿ ಕೆಲಸಕ್ಕೆ ಇದ್ದ ಈ ಯುವತಿಯನ್ನು 2006ರ ಜೂನ್ 20ರಂದು ಮಂಗಳೂರಿಗೆ ಕರೆಸಿಕೊಂಡಿದ್ದ. ವಿವಾಹಕ್ಕೆ ಗಂಡು ನೋಡುವ ಉದ್ದೇಶದಿಂದ ಜೊತೆಗೆ ಆಕೆಯ ಅತ್ತೆ ಕೂಡ ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಲ್ಲಿ ಈ ಮೂರು ಮಂದಿ ಭೇಟಿಯಾಗಿ ವಿವಾಹದ ಬಗ್ಗೆ ಮಾತುಕತೆ ನಡೆಸಿದ್ದರು. ಬಳಿಕ ಯುವತಿಯ ಜೊತೆಗೆ ಸುಧಾಕರ ಬಸ್‌ ಹತ್ತಿ ಹೋಗಿರುವುದನ್ನು ಆಕೆಯ ಅತ್ತೆ ನೋಡಿದ್ದರು. ಅದು ಬಿಟ್ಟರೆ, ಬಳಿಕ ಅವರು ಎಲ್ಲಿಗೆ ಹೋಗಿದ್ದರು ಎನ್ನುವುದು ಅತ್ತೆಗೆ ಗೊತ್ತಿರಲಿಲ್ಲ.

ಮಂಗಳೂರು ನ್ಯಾಯಾಲಯ

ಅಂದು ಕಾಮುಕ ಮೋಹನ್ ಕುಮಾರ್, ಯುವತಿಯನ್ನು ಮಡಿಕೇರಿಯ ವಸತಿಗೃಹವೊಂದಕ್ಕೆ ಕರೆದೊಯ್ದಿದ್ದ. ಮರುದಿನ ಆಕೆಯನ್ನು ಅತ್ಯಾಚಾರಗೈದು ಸೈನೆಡ್ ನೀಡಿ ಕೊಲೆ ಮಾಡಿದ್ದ. ಕೊಲೆಯಾದ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನೂ ದೋಚಿ ಮಂಗಳೂರಿನ ಫೈನಾನ್ಸ್‌ವೊಂದರಲ್ಲಿ ಅಡವಿರಿಸಿದ್ದನು.

2009ರ ಅಕ್ಟೋಬರ್ 21ರಂದು ಬಂಟ್ವಾಳದಲ್ಲಿ ಬಂಧಿತನಾದ ಮೋಹನ ಕುಮಾರ್, ಯುವತಿಗೆ ಸೈನೆಡ್ ನೀಡಿ ಕೊಲೆ ಮಾಡಿರುವುದನ್ನು ಬಾಯಿಬಿಟ್ಟಿದ್ದ. ಈ ವೇಳೆ ಮಂಜೇಶ್ವರದ ಯುವತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ಮೋಹನಕುಮಾರ್‌ನನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದರು. ಮಂಜೇಶ್ವರ ಪೊಲೀಸ್ ಠಾಣೆಗೆ ಕರೆತಂದ ಮೋಹನಕುಮಾರನನ್ನು ನೋಡಿದ ಮೃತ ಯುವತಿಯ ಅತ್ತೆ, ‘ಈತನೇ ಸುಧಾಕರ’ ಎಂದು ಗುರುತು ಹಿಡಿದಿದ್ದರು. ಅಲ್ಲದೆ, ಮೋಹನ ಕುಮಾರ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ಸಾಕ್ಷಿಯನ್ನು ಕೂಡ ತನಿಖೆಗೆ ಬಳಸಿಕೊಳ್ಳಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ 41 ಸಾಕ್ಷಿ, 50 ದಾಖಲೆ ಹಾಗೂ 42 ಸೊತ್ತುಗಳನ್ನು ಪರಿಶೀಲನೆ ನಡೆಸಲಾಗಿದೆ. ಆರೋಪಿ ಮೋಹನಕುಮಾರ್ ವಿರುದ್ಧ ಸೆಕ್ಷನ್ 328 (ವಿಷ ನೀಡಿ ಕೊಲೆ), 392 (ಆಭರಣ ದರೋಡೆ), 394 (ಬಲವಂತ ವಿಷ ಪ್ರಾಶನ), 302 (ಕೊಲೆ), 417 (ಮೋಸ), 201 (ಸಾಕ್ಷನಾಶ) ಆರೋಪವನ್ನು ಹೊರಿಸಿದ್ದು, ಈ ಆರೋಪಗಳು ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಆರೋಪಿ ವಿರುದ್ಧದ ಅಪಹರಣ ಹಾಗೂ ಅತ್ಯಾಚಾರ ಪ್ರಕರಣವನ್ನು ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ.

ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ವಿಚಾರಣೆ ನಡೆದಿದ್ದು, ನ್ಯಾಯಾಧೀಶೆ ಸೈಯಿದುನ್ನೀಸಾ ಶಿಕ್ಷೆ ಪ್ರಮಾಣದ ತೀರ್ಪನ್ನು ಜುಲೈ 18ರ ವಿಚಾರಣೆಗೆ ಕಾಯ್ದಿರಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು.

Last Updated : Jul 14, 2019, 6:40 AM IST

For All Latest Updates

TAGGED:

ABOUT THE AUTHOR

...view details