ಸುಳ್ಯ :ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಎಂಬುವರ ಮನೆಗೆ ನಿನ್ನೆ ರಾತ್ರಿ ದರೋಡೆಕೋರರು ನುಗ್ಗಿ ಮನೆಮಂದಿಗೆ ಮಚ್ಚು ತೋರಿಸಿ ಬೆದರಿಸಿ 100 ಗ್ರಾಂ. ಚಿನ್ನ ಹಾಗೂ 1.50 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಂಪಾಜೆಯಲ್ಲಿ ದೇವರ ಪೂಜಾ ಕಾರ್ಯ, ಜ್ಯೋತಿಷ್ಯ ಶಾಸ್ತ್ರದಲ್ಲಿ ಅಂಬರೀಶ್ ಭಟ್ ಕುಟುಂಬ ಹೆಸರುವಾಸಿಯಾಗಿದೆ. ಇವರ ಇಬ್ಬರು ಪುತ್ರರು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯೋಗದಲ್ಲಿದ್ದಾರೆ. ಕಳ್ಳತನ ನಡೆದ ವೇಳೆ ಅಂಬರೀಶ್ ಭಟ್ ಅವರು ಮನೆಯಲ್ಲಿ ಇರಲಿಲ್ಲ. ಈ ವೇಳೆ ಕಳ್ಳರ ಗುಂಪೊಂದು ಮನೆಗೆ ನುಗ್ಗಿದೆ. ಮನೆಯಲ್ಲಿ ಮಹಿಳೆಯರು ಮಾತ್ರ ಇದ್ದರು ಎನ್ನಲಾಗಿದೆ.
ಮನೆಗೆ ನುಗ್ಗಿದ ಕಳ್ಳರು ಅಂಬರೀಷ್ ಭಟ್ ಅವರ ಮಗ ಶ್ರೀವತ್ಸ ಅವರ ಪತ್ನಿಯ ತಾಳಿ ಸರವನ್ನು ಕಿತ್ತುಕೊಂಡಿದ್ದಾರೆ. ಆಗ ತಾನೆ ತೊಟ್ಟಿಲಲ್ಲಿ ಮಲಗಿದ್ದ ಅವಳಿ ಮಕ್ಕಳಿಗೆ ಏನೂ ಮಾಡಬೇಡಿ ಎಂದು ಮನೆಯವರು ಗೋಗರೆದಿದ್ದಾರೆ.
ಎಳನೀರು ಕಡಿಯವ ಮಚ್ಚು ಹಿಡಿದಿದ್ದ ದರೋಡೆಕೋರರು ಮನೆಯ ಕಪಾಟಿನ ಕೀಲಿ ಕೈ ನೀಡುವಂತೆ ಹೇಳಿದ್ದಾರೆ. ಜೀವ ಭಯದಿಂದ ಮಹಿಳೆಯರು ಕೀ ನೀಡಿದ್ದರು. ತಕ್ಷಣವೇ ಕಳ್ಳರು ಅದರಲ್ಲಿದ್ದ ಚಿನ್ನ ಹಾಗೂ ನಗದನ್ನು ದೋಚಿ ಕತ್ತಲಲ್ಲಿ ಪರಾರಿಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ರವಾಣೆಯಾಗಿ, ಪೊಲೀಸರು ಕಳ್ಳರ ವಾಹನದ ಪತ್ತೆಗೆ ಯತ್ನಿಸಿದ್ದರು. ಆದರೆ, ಕಳ್ಳರು ತಪ್ಪಿಸಿಕೊಂಡಿದ್ದಾರೆ.
ಇತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ದರೋಡೆ ಪ್ರಕರಣಗಳಲ್ಲಿ ಅತ್ಯಂತ ದೊಡ್ಡ ಪ್ರಕರಣ ಇದಾಗಿದೆ. ಈಗಾಗಲೇ ಮಂಗಳೂರಿನಿಂದ ಉನ್ನತ ಮಟ್ಟದ ಪೊಲೀಸರ ತಂಡ ಸಂಪಾಜೆಗೆ ಬಂದು ತನಿಖೆ ಕೈಗೊಂಡಿದೆ. ಶ್ವಾನ ದಳ, ಬೆರಳಚ್ಚು ತಂಡಗಳು ತನಿಖೆ ನಡೆಸಿದ್ದು, ಇದೀಗ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.