ಪುತ್ತೂರು(ದಕ್ಷಿಣ ಕನ್ನಡ):ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ನಡೆಯುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ 281 ಜೋಡಿಗಳು ಈ ಬಾರಿ ಭಾಗವಹಿಸುತ್ತಿದ್ದು ದಾಖಲೆಯನ್ನು ನಿರ್ಮಿಸಿದೆ ಎಂದು ಪುತ್ತೂರು ಕೋಟಿ-ಚೆನ್ನಯ ಸಮಿತಿ ಉಪಾಧ್ಯಕ್ಷ ನಿರಂಜನ್ ರೈ ಹೇಳಿದ್ದಾರೆ. 29ನೇ ವರ್ಷದ ಕಂಬಳವನ್ನು ಈ ಬಾರಿ ಆಯೋಜಿಸಲಾಗಿದ್ದು, ಮಿಕ್ಕ ಕಂಬಳಗಳಿಗಿಂತ ಕೊಂಚ ವಿಭಿನ್ನ ರೀತಿಯಲ್ಲಿ ಈ ಕಂಬಳ ನಡೆಯುತ್ತಿದೆ.
ದೇವರಗದ್ದೆಯ ಕಂಬಳ ಎಂದೇ ಪ್ರಸಿದ್ಧಿ ಪಡೆದಿರುವ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು. ಕೊರೊನಾದಿಂದ ಕಂಬಳವನ್ನು ಮಿಸ್ ಮಾಡಿಕೊಂಡಿದ್ದ ಕಂಬಳಪ್ರಿಯರು ಈ ಬಾರಿ ಅತ್ಯಂತ ಉತ್ಸಾಹದಿಂದ ಕಂಬಳವನ್ನು ವೀಕ್ಷಿಸಲು ಬರುತ್ತಿದ್ದಾರೆ. ಕೇವಲ ಕರಾವಳಿ ಜಿಲ್ಲೆಯವರು ಮಾತ್ರವಲ್ಲದೆ ರಾಜ್ಯದ ಇತರ ಭಾಗಗಳ ಜನರೂ ಕಂಬಳವನ್ನು ವೀಕ್ಷಿಸಲು ಬರುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಪುತ್ತೂರಿನಲ್ಲಿ ನಡೆಯುವ ಕಂಬಳಕ್ಕೆ ಹೆಚ್ಚಿನ ಸಂಖ್ಯೆಯ ಕೋಣಗಳು ಬರುವುದು ಇಲ್ಲಿನ ವಿಶೇಷತೆಯಾಗಿದೆ. ಈ ಬಾರಿ ಒಟ್ಟು 281 ಜೋಡಿ ಕೋಣಗಳು ಈ ಕಂಬಳದಲ್ಲಿ ಭಾಗಿಯಾಗಿದ್ದು, ವಿವಿಧ ವಿಭಾಗಗಳಲ್ಲಿ ಕೋಣಗಳ ಓಟದ ಸ್ಪರ್ಧೆ ನಡೆಯುತ್ತದೆ.