ಮಂಗಳೂರು: ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಹಾಜರಾಗಬೇಕು ಎನ್ನುವ ಹೈಕೋರ್ಟ್ ತೀರ್ಪು ದುರದೃಷ್ಟಕರ. ಆದರೆ ಇದಕ್ಕೆ ಸುಪ್ರೀಂಕೋರ್ಟ್ನಿಂದ ನ್ಯಾಯ ದೊರಕುವ ನಿರೀಕ್ಷೆಯಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯೆ, ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಹೇಳಿದರು.
ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ: ನಗರದ ಪುರಭವನದಲ್ಲಿ ಸಿಪಿಎಂ ಆಯೋಜಿಸಿದ್ದ ಸೌಹಾರ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರದ ಹಿಜಾಬ್ ನಿಷೇಧ ಆದೇಶವನ್ನು ನಾವು ವಿರೋಧಿಸುತ್ತೇವೆ. ಕೇಂದ್ರೀಯ ವಿದ್ಯಾಲಯಗಳಲ್ಲೂ ಶಿರವಸ್ತ್ರಕ್ಕೆ ಅವಕಾಶವಿದೆ. ಹಾಗಾದರೆ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಏಕೆ ಈ ತಾರತಮ್ಯ.
ಇದು ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರವಿಡುವ ಬಿಜೆಪಿ ಕುತಂತ್ರ. ಇದಕ್ಕೆ ಪೂರಕವಾಗಿ ಮುಸ್ಲಿಂ ಮೂಲಭೂತವಾದಿ ಪಿಎಫ್ಐ, ಎಸ್ಡಿಪಿಐ ಕೂಡಾ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘ ಪರಿವಾರದಿಂದ ಅಪಾಯ: ದೇಶಕ್ಕೆ ಹೊರಗಿನ ಶಕ್ತಿಗಳಿಗಿಂತ ಸಂವಿಧಾನದ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಸಂಘ ಪರಿವಾರದಿಂದ ಹೆಚ್ಚು ಅಪಾಯವಿದೆ. ಸಂಘಪರಿವಾರ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿ ದೇಶ ಹೊಡೆಯುವ ಹುನ್ನಾರ ನಡೆಸುತ್ತಿದೆ. ಆರ್ಎಸ್ಎಸ್ ಹಾಗೂ ಅದರ ಅಂಗಸಂಸ್ಥೆಗಳು ಭಾರತಕ್ಕೆ ಅತೀ ದೊಡ್ಡ ಶತ್ರುಗಳು.
ದೇಶದ ಸ್ವಾತಂತ್ರ್ಯಕ್ಕೆ ಇವರೇನು ಕೊಡುಗೆ ಕೊಟ್ಟಿಲ್ಲ. ಬ್ರಿಟಿಷರ ಪರವಾಗಿದ್ದು, ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದಿದ್ದ ಹಿಂದುತ್ವ ಸಿದ್ಧಾಂತದ ಸಾವರ್ಕರ್ ಅವರನ್ನು ಹೀರೋ ಮಾಡಿರುವ ಅವರೆಂದೂ ಕೂಡ ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ ಎಂದು ಬೃಂದಾ ಕಾರಟ್ ಕಿಡಿ ಕಾರಿದರು.
ಇದನ್ನೂ ಓದಿ:ಸಿ.ಪಿ.ಯೋಗೇಶ್ವರ್ಗೆ ಸಚಿವ ಸ್ಥಾನ ಸಾಧ್ಯತೆ..!
ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಹಿಂಸೆಯ ಪ್ರದರ್ಶನವಾಗಿದೆ. ಸಮುದಾಯವೊಂದರ ಮೇಲೆ ದ್ವೇಷ ಸಾಧಿಸಲು ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಕಾಶ್ಮೀರಿ ಜನರ ಒಗ್ಗಟ್ಟು ಪ್ರದರ್ಶನ ಹಾಗೂ ಕಾಶ್ಮೀರಿ ಪಂಡಿತರನ್ನು ಸುರಕ್ಷಿತವಾಗಿ ಹುಟ್ಟೂರಿಗೆ ಕರೆ ತರುವ ಕೆಲಸವಾಗಬೇಕು. ಈ ಮೂಲಕ ಅವರಿಗೆ ನ್ಯಾಯ ದೊರಕಿಸಿಕೊಡಲು ಆದ್ಯತೆ ನೀಡಬೇಕು. ಆದರೆ ಸಿನಿಮಾ ಮೂಲಕ ಹಿಂಸೆಯ ವಿಜೃಂಭಣೆಯಿಂದ ಯಾರಿಗೂ ಲಾಭವಾಗದು ಎಂದು ಅಸಮಾಧಾನ ಹೊರಹಾಕಿದರು.