ಕಡಬ: ನಾಲ್ಕು ಚಕ್ರಗಳ ವೈಯಕ್ತಿಕ ವಾಹನ ಇದ್ದರೂ ನಿಯಮಕ್ಕೆ ವಿರುದ್ಧವಾಗಿ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರಾಜ್ಯದ ಸುಮಾರು 12,584 ಪಡಿತರ ಚೀಟಿದಾರರಿಗೆ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ ಸರ್ಕಾರ ಅನರ್ಹ ಪಡಿತರ ಚೀಟಿಗಳನ್ನು ಹಿಂದೆ ಪಡೆಯಲು ಹಲವು ಅವಕಾಶ ನೀಡಿದ್ದರೂ ನಿರ್ಲಕ್ಷಿಸಿದ ಅನರ್ಹರ ಮಾಹಿತಿಗಳನ್ನು ಸಂಗ್ರಹಿಸಿ ಅವರಿಂದ ಈವರೆಗೆ ಪಡೆದ ಆಹಾರ ಸಾಮಗ್ರಿಗೆ ಇಲಾಖೆಯು ದಂಡ ವಸೂಲಿ ಮಾಡಲಿದೆ ಎನ್ನಲಾಗಿದೆ.
ಏನಿದು ಅನರ್ಹತೆ?:ನಾಲ್ಕುಚಕ್ರ ವಾಹನ ಇರುವವರು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ ಈಗಾಗಲೇ ದಂಡರಹಿತವಾಗಿ 2019ರ ಸೆಪ್ಟೆಂಬರ್ 3ರೊಳಗೆ ರದ್ದು ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು. ಆ ಬಳಿಕ ಈ ಅವಧಿಯನ್ನು ಅ.15ರ ತನಕ ವಿಸ್ತರಿಸಿತು. ಹೀಗೆ ನಾಲ್ಕಾರು ಬಾರಿ ಸರೆಂಡರ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ರದ್ದು ಮಾಡದ ಅನರ್ಹ ಪಡಿತರ ಚೀಟಿದಾರರಿಗೆ ದಂಡ ವಿಧಿಸಲು ಇದೀಗ ಇಲಾಖೆ ಕ್ರಮ ಕೈಗೊಂಡಿದೆ.
ಮಾರುಕಟ್ಟೆ ಮೌಲ್ಯ ಆಧರಿಸಿ ದಂಡ: ನಾಲ್ಕು ಚಕ್ರಗಳ ವಾಹನ ಹೊಂದಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರ ಕುಟುಂಬಗಳ ಮಾಹಿತಿ ನೀಡುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಕರ್ನಾಟಕ ಸಾರಿಗೆ ಇಲಾಖೆಯನ್ನು ಕೋರಿತ್ತು. ಇಲಾಖೆಯು ಅಂತವರ ಪಟ್ಟಿ ಸಿದ್ಧಪಡಿಸಿ ಮಾಹಿತಿ ನೀಡಿದೆ ಎನ್ನಲಾಗಿದೆ. ಇದರನ್ವಯ ಆಯಾ ತಾಲೂಕು ಕಚೇರಿಯ ಆಹಾರ ಶಿರಸ್ತೇದಾರ ಅಥವಾ ನಿರೀಕ್ಷಕರಿಗೆ ಅನರ್ಹ ಪಡಿತರ ಚೀಟಿದಾರರ ಪಟ್ಟಿ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿಯಮ ಉಲ್ಲಂಘಿಸಿದ ಹಲವರಿಗೆ ಈಗಾಗಲೇ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ದಾಖಲೆಗಳು, ಹೆಸರಿನ ವ್ಯತ್ಯಾಸ ಗೊಂದಲ ಇದ್ದಲ್ಲಿ ಸ್ಥಳ ಪರಿಶೀಲಿಸುವ ಅಧಿಕಾರವನ್ನು ನೀಡಲಾಗಿದ್ದು, ಅನರ್ಹರು ದಂಡ ಪಾವತಿಸಲೇ ಬೇಕಿದೆ. ಮಾರುಕಟ್ಟೆ ಮೌಲ್ಯ ಆಧರಿಸಿ ದಂಡ ನಿಗದಿ ಪಡಿಸಲಾಗಿದೆ.
ಜಿಲ್ಲಾವಾರು ಅನರ್ಹ ಬಿಪಿಎಲ್ ಕಾರ್ಡ್ಗಳ ಪಟ್ಟಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 121, ಉಡುಪಿಯಲ್ಲಿ 36 ಸೇರಿ ಒಟ್ಟು 172 ಅನರ್ಹ ಪಡಿತರ ಚೀಟಿಗಳು ಇವೆ. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಗೆ ಸಂಬಂಧಿಸಿದಂತೆ 34 ಜಿಲ್ಲೆಗಳಲ್ಲಿ ಸುಮಾರು 12,012 ಪಡಿತರ ಚೀಟಿದಾರರು ದಂಡ ಕಟ್ಟಬೇಕಿದೆ.
ಇನ್ನುಳಿದಂತೆ ಗರಿಷ್ಠ ಎಂದರೆ ಕಲುಬುರಗಿಯಲ್ಲಿ 2,026, ಚಿಕ್ಕಮಗಳೂರಿನಲ್ಲಿ 1,838, ಬೆಂಗಳೂರಿನಲ್ಲಿ-1273 ಅನರ್ಹ ಬಿಪಿಎಲ್ ಕಾರ್ಡುಗಳಿವೆ. ಕನಿಷ್ಠ ಅನರ್ಹ ಕಾರ್ಡುಗಳ ಪಟ್ಟಿಯಲ್ಲಿ ಗದಗ 13, ಧಾರವಾಡ 15, ಮತ್ತು ಕೊಡಗು ಜಿಲ್ಲೆಯಲ್ಲಿ 21 ಕಾರ್ಡುಗಳಿವೆ. ಇನ್ನು ಅಂತ್ಯೋದಯ ಪಟ್ಟಿಯಲ್ಲಿ 31 ಜಿಲ್ಲೆಗಳಲ್ಲಿ ಒಟ್ಟು 572 ಅನರ್ಹ ಕಾರ್ಡುಗಳಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಮತ್ತು ಉಡುಪಿಯಲ್ಲಿ 6 ಪಡಿತರ ಚೀಟಿಗಳಿವೆ.