ಪುತ್ತೂರು(ದಕ್ಷಿಣ ಕನ್ನಡ): ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪುತ್ತೂರಿನ ಬೊಳುವಾರಿನಲ್ಲಿ ಸರ್ಕಾರಿ ಬಸ್ವೊಂದರ ಮೇಲೆ ಕೆಲ ಯುವಕರು ಕಲ್ಲು ತೂರಿದ್ದಾರೆ. ಮಂಗಳೂರಿಗೆ ಹೋಗುತ್ತಿದ್ದ ಬಸ್ಗೆ ಬೊಳುವಾರಿನಲ್ಲಿ ಕಲ್ಲೆಸೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪುತ್ತೂರು ವಿಭಾಗದ ಸುಳ್ಯ, ಕಡಬ, ಪುತ್ತೂರು ತಾಲೂಕುಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಮಂಗಳವಾರ ರಾತ್ರಿ ಕೆಲವು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಘಟನೆಯ ನಂತರ ಸುಳ್ಯ, ಕಡಬ ಹಾಗು ಪುತ್ತೂರು ತಾಲೂಕುಗಳಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಸೆಕ್ಷನ್ 144 ಜಾರಿ ಮಾಡಿ ಪುತ್ತೂರು ವಿಭಾಗಾಧಿಕಾರಿ ಗಿರೀಶ್ ನಂದನ್ ಆದೇಶ ಹೊರಡಿಸಿದ್ದಾರೆ. ಪುತ್ತೂರು, ಸುಳ್ಯ, ಕಡಬ ತಾಲೂಕಿನಾದ್ಯಂತ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಪುತ್ತೂರಿನ ಎರಡು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಡಬ, ಬೆಳ್ಳಾರೆ ಪೇಟೆಗಳು ಸಂಪೂರ್ಣ ಬಂದ್ ಆಗಿವೆ. ಕಡಬದಲ್ಲಿ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ.
ಪ್ರವೀಣ್ ಹುಟ್ಟೂರಲ್ಲಿ ಬಿಲ್ಲವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಪ್ರವೀಣ್ ಮೃತದೇಹವನ್ನು ಬೆಳ್ಳಾರೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪುತ್ತೂರು ನಗರದಿಂದ ಪಾರ್ಥಿವ ಶರೀರದ ಮೆರವಣಿಗೆ ಹೊರಟು ದರ್ಬೆ, ಸವಣೂರು ಕಾಣಿಯೂರು, ನಿಂತಿಕಲ್ಲು ಮೂಲಕ ಬೆಳ್ಳಾರೆಗೆ ಕೊಂಡೊಯ್ಯಲಾಗುತ್ತಿದೆ.
ಹಿಂದೂ ಕಾರ್ಯಕರ್ತರು ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಪ್ರತಿಭಟನೆಯನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು, ಎಸ್.ಅಂಗಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ.
144 ಸೆಕ್ಷನ್:ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪುತ್ತೂರು ತಾಲೂಕು, ಸುಳ್ಯ ತಾಲೂಕು, ಕಡಬ ತಾಲೂಕು ವ್ಯಾಪ್ತಿಯಲ್ಲಿ ಮುಂಜಾಗ್ರತ ಕ್ರಮವಾಗಿ ಕಲಂ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜು.28ರ ಮಧ್ಯರಾತ್ರಿ ಗಂಟೆ 12 ಗಂಟೆಯ ತನಕ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು 5 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ, ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮತ್ತು ಸರ್ಕಾರಿ ಕಚೇರಿ ಸುತ್ತಮುತ್ತ ಗುಂಪು ಸೇರುವುದನ್ನು ನಿಷೇಧಿಸಿದೆ.
ತನಿಖೆಗೆ ವಿಶೇಷ ತಂಡ ರಚನೆ:ಪ್ರವೀಣ್ ಹತ್ಯೆಯ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ನಿನ್ನೆ ರಾತ್ರಿ ಬೆಳ್ಳಾರೆಯಲ್ಲಿ ನಿಂತಿದ್ದ ವೇಳೆಯಲ್ಲಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಹತ್ಯೆ ನಡೆಸಿದೆ. ಘಟನೆಯ ಬೆನ್ನಲ್ಲೇ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್‌ಪಿ ಭಗವಾನ್ ಸೋನಾವಣೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬಿಜೆಪಿ ಯುವ ಮುಖಂಡನ ಬರ್ಬರ ಕೊಲೆ: ಸುಳ್ಯ, ಕಡಬ, ಪುತ್ತೂರು ತಾಲೂಕು ಬಂದ್‌ಗೆ ಕರೆ