ಕರ್ನಾಟಕ

karnataka

ETV Bharat / city

ಪ್ರಧಾನಿ, ಬಿಎಸ್​​ವೈ ಹಾಗೂ ಸಿಎಂ ಬೊಮ್ಮಾಯಿ ಆಡಳಿತದ ಬಗ್ಗೆ ಮತದಾರರ ಮೆಚ್ಚುಗೆ ಇದೆ : ಕಟೀಲ್

ಉಪಚುನಾವಣೆ ನಡೆಯುತ್ತಿರುವ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ ಸಾರ್ವಜನಿಕ ಸಭೆ, ಮಹಾಶಕ್ತಿ ಕೇಂದ್ರದ ಮಟ್ಟದ ಸಭೆ ಹಾಗೂ ಮನೆ ಮನೆ ಭೇಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಯ ತಂತ್ರಗಳನ್ನು ರೂಪಿಸಿದೆ..

Nalin Kumar kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

By

Published : Oct 22, 2021, 7:10 PM IST

ಪುತ್ತೂರು :ಸಿಂದಗಿ ಮತ್ತು ಹಾನಗಲ್​​ ಎರಡೂ ಕ್ಷೇತ್ರಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಕುರಿತು ಮತದಾರರಿಗೆ ಮೆಚ್ಚುಗೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಬೈ ಎಲೆಕ್ಷನ್‌ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿರುವುದು..

ಶುಕ್ರವಾರ ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ನಡೆದ ವಾರ್ಷಿಕ ನಾಗತಂಬಿಲ ಹಾಗೂ ಕೊರೊನಾ ಲಸಿಕಾ ವಿತಾರಣಾ ಕೇಂದ್ರ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಉಪಚುನಾವಣೆ ನಡೆಯುತ್ತಿರುವ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ ಸಾರ್ವಜನಿಕ ಸಭೆ, ಮಹಾಶಕ್ತಿ ಕೇಂದ್ರದ ಮಟ್ಟದ ಸಭೆ ಹಾಗೂ ಮನೆ ಮನೆ ಭೇಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಯ ತಂತ್ರಗಳನ್ನು ರೂಪಿಸಿದೆ ಎಂದರು.

ಬಿಸಿರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿ ಮರು ಆರಂಭ

ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಉದ್ದೇಶಿತ ಬಿ ಸಿ ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿಯ ಮರು ಆರಂಭ ಶೀಘ್ರದಲ್ಲಿ ನಡೆಯಲಿದೆ. ನ.1ರಂದು ಕಾಮಗಾರಿಯನ್ನು ಮರು ಆರಂಭಿಸಲು ಉದ್ದೇಶಿಸಲಾಗಿದ್ದರೂ ಅಕಾಲಿಕ ಮಳೆಯ ಕಾರಣದಿಂದ ಮರು ಆರಂಭ ಕಾರ್ಯವನ್ನು ಕೆಲ ದಿನಗಳ ಕಾಲ ಮುಂದೂಡಲಾಗಿದೆ. ಗುತ್ತಿಗೆದಾರರು ಕಾಮಗಾರಿಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದು ಕಟೀಲ್ ತಿಳಿಸಿದರು.

ಎಪಿಎಂಸಿ ಸಂಪರ್ಕ ರಸ್ತೆಯಲ್ಲಿನ ಸಾಲ್ಮರ ರೈಲ್ವೆ ಲೆವೆಲ್‌ ಕ್ರಾಸಿಂಗ್‌ಗೆ ಪರ್ಯಾಯವಾಗಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರೈಲ್ವೆ ತಳ ಸೇತುವೆಯ ಕಾಮಗಾರಿಗೆ ಕೇಂದ್ರ ಸರ್ಕಾರ ನೀಡಬೇಕಾಗಿರುವ 6 ಕೋಟಿ ಹಣವನ್ನು ಶೀಘ್ರವೇ ರೈಲ್ವೆ ಸಚಿವರು ಮಂಜೂರಾತಿ ಮಾಡಲಿದ್ದಾರೆ.

ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿರುವ ಹಾರಾಡಿ ರೈಲ್ವೆ ಮೇಲ್ಸೇತುವೆಯ ಪಕ್ಕದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಸೇತುವೆ ಅಗಲೀಕರಣ ಕಾಮಗಾರಿಯ ಕುರಿತು ಮುಂದಿನ ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಕಟೀಲ್​​ ಹೇಳಿದರು.

ಕೃಷಿ ವಿಜ್ಞಾನಿಗಳಿಗೆ ಸೂಚನೆ

ಅಡಿಕೆ ತೋಟಗಳಲ್ಲಿ ಕಾಣಿಸಿಕೊಂಡಿರುವ ಹಳದಿ ಎಲೆ ರೋಗ ಮತ್ತು ಬೇರು ರೋಗಕ್ಕೆ ಸಂಬಂಧಿಸಿದಂತೆ ಔಷಧಿ ಕಂಡು ಹಿಡಿಯಲು ಸಂಶೋಧನೆ ನಡೆಸುವಂತೆ ಕೃಷಿ ವಿಜ್ಞಾನಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕೃಷಿ ವಿಜ್ಞಾನಿಗಳ ತಂಡ ತೋಟಗಳಲ್ಲಿ ಈಗಾಗಲೇ ಪರಿಶೀಲನೆ ಮಾಡಿದೆ.

ಅಡಿಕೆ ಬೆಳೆಗಾರರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬರಲಿವೆ ಎಂದರು. ಈ ಸಂದರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಸೇರಿ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details