ಮಂಗಳೂರು ( ದಕ್ಷಿಣ ಕನ್ನಡ): ಬಿಜೆಪಿ ಮುಖಂಡರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡುತ್ತಿದ್ದಾರೆ. ಅದಕ್ಕೂ ಮೊದಲು 'ಮಂಗಳೂರು ಫೈಲ್ಸ್' ನೋಡಲಿ. ಈ ಮೂಲಕ ದಲಿತ ದಿನೇಶ್ ನಾಯ್ಕ್, ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಗೆ ನ್ಯಾಯ ದೊರಕಿಸಿಕೊಡಲಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಶೆಟ್ಟಿ ಆಗ್ರಹಿಸಿದರು.
ಹತ್ಯೆಯಾದ ದಲಿತ ವ್ಯಕ್ತಿ ಬೆಳ್ತಂಗಡಿಯ ದಿನೇಶ್ ನಾಯ್ಕ್ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿವಮೊಗ್ಗದಲ್ಲಿ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಅದೇ ದಲಿತ ವ್ಯಕ್ತಿ ದಿನೇಶ್ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಅವರ ಕುಟುಂಬಕ್ಕೆ ಕೇವಲ 8 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಶೆಟ್ಟಿ ಸರ್ಕಾರ ಸಾವಿನ ಪರಿಹಾರದಲ್ಲೂ ತಾರತಮ್ಯ ಮಾಡಲು ಹೊರಟಿದೆ. ದಲಿತರ ಸಾವು ಸಾವಲ್ಲವೇ ಎಂದು ಪ್ರಶ್ನಿಸಿದ ಅವರು ತಕ್ಷಣ ಈ ಪರಿಹಾರ ಮೊತ್ತವನ್ನು 25ಲಕ್ಷ ರೂ.ಗೆ ಏರಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ:ಮೂವರು ಹೆಂಡ್ತಿಯರ ಗಂಡನ ಕೊಲೆ ಪ್ರಕರಣ: ಪತಿಯ ಹತ್ಯೆಗೆ 10 ಲಕ್ಷ ಸುಪಾರಿ ಕೊಟ್ಟಿದ್ದು ಎರಡನೇ ಪತ್ನಿ!
ಆರ್ಟಿಐ ಕಾರ್ಯಕರ್ತ ಹತ್ಯೆಯಾಗಿ 6 ವರ್ಷಗಳು ಕಳೆದರೂ ಅವರ ಕುಟುಂಬಕ್ಕೆ ಈವರೆಗೆ ನ್ಯಾಯ ದೊರಕಿಲ್ಲ. 70 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸುವ ಬಿಜೆಪಿ ಮುಖಂಡರು ತಮ್ಮ ಅಧಿಕಾರಾವಧಿಯ ಈ ಏಳು ವರ್ಷಗಳಲ್ಲಿ ಯಾಕೆ ಈ ಕುಟುಂಬಕ್ಕೆ ನ್ಯಾಯ ದೊರಕಿಸಲು ಸಾಧ್ಯವಾಗಿಲ್ಲ. ಈವರೆಗೆ ಒಬ್ಬನೇ ಒಬ್ಬ ಬಿಜೆಪಿ ಮುಖಂಡ ವಿನಾಯಕ ಬಾಳಿಗಾ ಮನೆಗೆ ಭೇಟಿ ಕೊಟ್ಟಿಲ್ಲ ಎಂದರು. ತಕ್ಷಣ ಈ ಪ್ರಕರಣವನ್ನು ಎಸ್ಐಟಿಗೆ ವಹಿಸಬೇಕು ಎಂದು ಡಾ.ಪುಷ್ಪಾ ಅಮರನಾಥ ಆಗ್ರಹಿಸಿದರು.