ಮಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಭಾರಿ ಹಾನಿಯಾಗಿದ್ದರೂ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಾಗ ಯಾವುದೇ ಮನವಿ ನೀಡದೆ ಬಿಜೆಪಿಗರು ರಾಜ್ಯದ ಜನತೆಗೆ ಅನ್ಯಾಯವೆಸಗಿದ್ದಾರೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅತಿವೃಷ್ಟಿ ಆದರೂ ಜನರ ಕಣ್ಣೀರು ಒರೆಸುವ ಯೋಜನೆ ಮಾಡಿಲ್ಲ. ರಾಜ್ಯದ ಮುಖ್ಯಮಂತ್ರಿ, ಸಚಿವರಿಗೆ, ಸಂಸದರಿಗೆ ಕೇಂದ್ರ ಸರ್ಕಾರದಲ್ಲಿ ರಾಜ್ಯಕ್ಕೆ ಬೇಕಾದದ್ದನ್ನು ಕೇಳುವ ಧೈರ್ಯವಿಲ್ಲ. ಇದರಿಂದ ಜಿಲ್ಲೆಯ ಜನತೆ ಅನಾಥವಾಗಿದ್ದಾರೆ ಎಂದರು.
ಸುಳ್ಯದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೆ ಪರಿಹಾರ ನೀಡಲು ಉಸ್ತುವಾರಿ ಸಚಿವರ ಸಭೆ ಆಗಿಲ್ಲ. ಬಿಜೆಪಿ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಂಪೂರ್ಣ ವಿಫಲ ಆಗಿದೆ. ಕಡಲ್ಕೊರೆತವಾದ ಉಳ್ಳಾಲ, ಸುರತ್ಕಲ್ಗೆ ಸಿಎಂ ಸಹಿತ ಎಲ್ಲ ಸಚಿವರು ಬಂದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗೆ ಆದರೆ ಜನರು ಸರ್ಕಾರದ ಮೇಲೆ ಹೇಗೆ ವಿಶ್ವಾಸ ಇಡಬೇಕು ಎಂದು ಯು ಟಿ ಖಾದರ್ ಪ್ರಶ್ನಿಸಿದರು.
ಸರ್ಕಾರದ ವಿರುದ್ಧ ಶಾಸಕ ಯು ಟಿ ಖಾದರ್ ಕಿಡಿ ರಾಜ್ಯ ಸರ್ಕಾರ NDRF ನಿಧಿಯಿಂದ ರಾಜ್ಯಕ್ಕೆ ಬೇಕಾದ ಅನುದಾನ ಬರುತ್ತಿಲ್ಲ. ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಬಂದಾಗ ಪಕ್ಷದ ಬಗ್ಗೆ ಚರ್ಚೆ ಮಾಡಿದರೆ ಹೊರತು ರಾಜ್ಯದ ಜನರ ಬಗ್ಗೆ ಚರ್ಚೆ ಮಾಡಿಲ್ಲ. ಜನರಿಗೆ ಕೊಡಬೇಕಾದ ಪರಿಹಾರದ ಬಗ್ಗೆ ಮನವಿ ಸಲ್ಲಿಸಿಲ್ಲ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. 25 ಸಂಸದರು ಮೌನವಾಗಿರುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ರಾಜ್ಯಕ್ಕೆ ಬರುವ ಪಾಲು ಕೇಳಲು ಇವರಿಗೆ ಮುಜುಗರ ಆಗುವುದಿದ್ದರೆ ಸರ್ವಪಕ್ಷ ತಂಡ ಕರೆದುಕೊಂಡು ಹೋಗಲಿ. ನಾವು ಅಲ್ಲಿ ಮಾತಾಡುತ್ತೇವೆ ಎಂದರು.
ಶಾಂತಿ ಸಾಮರಸ್ಯ ಕಾಪಾಡಲು ಎಲ್ಲರೂ ಸಹಕಾರ ಕೊಡಬೇಕು. ಪೊಲೀಸ್, ಡಿಸಿ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗುತ್ತೇವೆ. ಆದರೆ ತೀರ್ಮಾನ ತೆಗೆದುಕೊಳ್ಳುವಾಗ ಜನರಿಗೆ ತೊಂದರೆ ಆಗದಂತೆ ನೋಡಬೇಕು. 3% ಜನರಿಂದ ಆಗುವ ತೊಂದರೆ ಪರಿಹರಿಸಲು ಹೋಗಿ 97% ಜನರಿಗೆ ಸಮಸ್ಯೆ ಆಗಬಾದರು ಎಂದು ಹೇಳಿದರು.
ಮಸೂದ್ ಮತ್ತು ಫಾಝಿಲ್ ಮನೆಗೆ ಭೇಟಿ ನೀಡಿ ಪರಿಹಾರ ನೀಡುವುದಾಗಿ ಸಿಎಂ ಹೇಳಿದ್ದಾರೆ. ರಾಜ್ಯದ ಸಿಎಂ ಸುಳ್ಳು ಹೇಳುವುದಿಲ್ಲ ಎಂಬ ವಿಶ್ವಾಸವಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಅಶ್ರಫ್ ಕಲಾಯಿ, ಶರತ್ ಮಡಿವಾಳ, ದೀಪಕ್, ಬಶೀರ್ ಹತ್ಯೆಗಳಾದಾಗ ಸಮಾನತೆಯಿಂದ ಪರಿಹಾರ ನೀಡಿದ್ದೇವೆ. ಯಾವುದೇ ತಾರತಮ್ಯ ಮಾಡಿಲ್ಲ. ಈ ಸರ್ಕಾರ ತಾರತಮ್ಯ ಮಾಡಬಾರದು ಎಂದರು.
ಇದನ್ನೂ ಓದಿ :ಸೆಮಿಕಂಡಕ್ಟರ್ & ಶೋ ಗ್ಲಾಸ್ ವಿಚಾರ: ಸಿಎಂ ಬೊಮ್ಮಾಯಿ ಭೇಟಿ ಮಾಡಿ ಚರ್ಚಿಸಿದ ಅನಿಲ್ ಅಗರ್ವಾಲ್