ಮಂಗಳೂರು: ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಅಭಿವೃದ್ಧಿ-ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಮೋದಿ ಹೆಸರು ಬಳಸಿಕೊಂಡು ಮತಯಾಚನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಿಡಿಕಾರಿದರು.
ಬಿಜೆಪಿಯವರು ಅಭಿವೃದ್ಧಿ, ಕುಡಿಯುವ ನೀರು, ಮಾಲಿನ್ಯ, ಫ್ಲೈ ಓವರ್, ಅಕ್ರಮ ಟೋಲ್ ಗೇಟ್, ವಿಮಾನ ನಿಲ್ದಾಣ ಹಾಗೂ ಎನ್ಎಂಪಿಟಿ ಖಾಸಗೀಕರಣದ ಬಗ್ಗೆ ಮಾತನಾಡುತ್ತಿಲ್ಲ. ಇಷ್ಟೆಲ್ಲಾ ಪ್ರಶ್ನೆಗಳಿರುವಾಗ ಮೋದಿ ಹೆಸರು, ಹಿಂದುತ್ವ ಮತ್ತು ಹುಸಿ ದೇಶಭಕ್ತಿಗಳನ್ನು ಬಳಸಿಕೊಂಡು ಇವರು ಮತ ಕೇಳುತ್ತಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದಲ್ಲಿ ನಡೆದಿದ್ದ ಮೋದಿ ಚುನಾವಣಾ ಪ್ರಚಾರ ಭಾಷಣದ ಸಂದರ್ಭ ಶೇ. 5 ರಷ್ಟು ಬಿಜೆಪಿ ಧ್ವಜ ಇರಲಿಲ್ಲ. ಬದಲಿಗೆ ಭಗವಧ್ವಜ, ಕೇಸರಿ ಧ್ವಜಗಳನ್ನು ಇರಿಸಿಕೊಂಡು ಧಾರ್ಮಿಕ ಸಂಕೇತಗಳ ಮೂಲಕ ಜನರಿಂದ ಮತ ಸೆಳೆಯುವ ತಂತ್ರ ಮಾಡಿದ್ದಾರೆ. ಅಲ್ಲದೆ ಅವರ ಪ್ರಚಾರ ಭಾಷಣಕ್ಕೆ ಬಂದ ಕಾರ್ಯಕರ್ತರ ಸಮೂಹ ದ.ಕ.ಜಿಲ್ಲೆಯ ಮಟ್ಟಿಗೆ ಅತ್ಯಂತ ಅವಮಾನಕರ ರೀತಿ ವರ್ತಿಸಿದೆ ಎಂದು ಆರೋಪಿಸಿದರು.