ಮಂಗಳೂರು (ದಕ್ಷಿಣ ಕನ್ನಡ):ಇನ್ನು ಮುಂದೆ ಅರ್ಜಿ ಗುಜರಾಯಿಸಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕ್ಯೂ ನಿಂತು ಜನನ ಪ್ರಮಾಣ ಪತ್ರವನ್ನು ಪಡೆಯುವ ತೊಂದರೆ ಇರುವುದಿಲ್ಲ. ಜನನ ಪ್ರಮಾಣ ಪತ್ರವು ಪೋಸ್ಟ್ ಮೂಲಕ ಮನೆ ಬಾಗಿಲಿಗೆ ಬರಲಿದೆ. ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಸೇವೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗವು ನಗರದ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಈ ಮೂಲಕ ಮುಂದಿನ ದಿನಗಳಲ್ಲಿ ಜನನ ಪ್ರಮಾಣ ಪತ್ರವು ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಸೇವೆ ಆರಂಭವಾಗಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸುಮಾರು 400-600 ಶಿಶುಗಳ ಜನನವಾಗುತ್ತದೆ. ರಾಜ್ಯದ 9 ಜಿಲ್ಲೆಗಳ, ಕೇರಳ ರಾಜ್ಯದ ಮೂರು ಜಿಲ್ಲೆಗಳ ಗರ್ಭಿಣಿಯರು ಈ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗುತ್ತಾರೆ. ಸದ್ಯ ಲೇಡಿಗೋಷನ್ ಆಸ್ಪತ್ರೆಯಲ್ಲಿ ಜನಿಸುವ ಶಿಶುಗಳ ಜನನ ಪ್ರಮಾಣ ಪತ್ರಗಳನ್ನು ಆಸ್ಪತ್ರೆಯಲ್ಲಿಯೇ ನೀಡಲಾಗುತ್ತದೆ. ಇದನ್ನು ಪಡೆಯಲು ಅರ್ಜಿದಾರರು 2 ಬಾರಿ ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು. ಆದರೆ ಪ್ರಸ್ತುತ ಭಾರತೀಯ ಅಂಚೆ ಇಲಾಖೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಿಂದ ಜನಸಾಮಾನ್ಯರು ಇಂತಹ ತೊಡಕಿನಿಂದ ಮುಕ್ತರಾಗಲಿದ್ದಾರೆ.