ಬಂಟ್ವಾಳ(ದಕ್ಷಿಣ ಕನ್ನಡ) :ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯಲ್ಲಿರುವ ಕೃಷಿಕ, ಪರಿಸರ ಪ್ರೇಮಿ, ಪಕ್ಷಿ ಪ್ರೇಮಿ ನಿತ್ಯಾನಂದ ಶೆಟ್ಟಿ ಅವರು ತಮ್ಮ ತೋಟದಲ್ಲಿ ಅಡಿಕೆ ಸೇರಿದಂತೆ ವಿವಿಧ ಕೃಷಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ಕೃಷಿಕರಾಗಿ ಮಾತ್ರವಲ್ಲದೆ ಪರಿಸರದ ಉಳಿವಿಗಾಗಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ.
ಈಗಾಗಲೇ ಇವರು ತಮ್ಮ ಎರಡು ಎಕರೆ ಭೂಮಿಯನ್ನು ಪಕ್ಷಿಗಳಿಗಾಗಿ ಮೀಸಲಿಟ್ಟಿದ್ದಾರೆ. ಇಲ್ಲಿ ಬೆಳೆಯುವ ಯಾವುದೇ ಹಣ್ಣು, ಹಂಪಲುಗಳನ್ನು ತೆಗೆಯದೆ ಪಕ್ಷಿಗಳಿಗೆ ತಿನ್ನಲು ಬಿಡುತ್ತಿದ್ದಾರೆ. ತಮ್ಮ ತೋಟದಲ್ಲಿ ಪಕ್ಷಿಗಳಿಗಾಗಿ ಅಲ್ಲಲ್ಲಿ ಗೂಡುಗಳನ್ನು ಸಹ ನಿರ್ಮಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಪರಿಸರ ಜಾಗೃತಿಯನ್ನು ಮೂಡಿಸುವ ಅಭಿಯಾನ ಕೈಗೊಂಡಿದ್ದಾರೆ.
ಇತ್ತೀಚೆಗೆ ನಿತ್ಯಾನಂದ ಶೆಟ್ಟಿ ಅವರ ತಾಯಿ ಸುಮತಿ ಅವರು ನಿಧನರಾದರು. ಇವರ ಅಂತ್ಯಕ್ರಿಯೆ ವೇಳೆ ಮಾವಿನ ಮರವನ್ನು ಕಡಿಯಲಾಗಿತ್ತು. ಅಮ್ಮನನ್ನು ಕಳೆದುಕೊಂಡು ದುಃಖತಪ್ತರಾಗಿದ್ದ ನಿತ್ಯಾನಂದ ಶೆಟ್ಟಿ ಅವರಿಗೆ ಮಾವಿನ ಮರವನ್ನು ಕಡಿದದ್ದು ಮತ್ತಷ್ಟು ದುಃಖವನ್ನು ನೀಡಿತ್ತು.