ಬಂಟ್ವಾಳ :ಬಾಲಕಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ಯುವಕನೋರ್ವನ್ನು ವಿಟ್ಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಯಾನೆ ಕುಟ್ಟ ಬಂಧಿತ ಆರೋಪಿ. ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಸಂಜೀವ ಎಂಬುವರು ತನ್ನ ಅಪ್ರಾಪ್ತ ವಯಸ್ಸಿನ ಮಗಳು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಗೆ ಸಾಹುಲ್ ಹಮೀದ್ ಎಂಬಾತ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಉಪಾಧೀಕ್ಷಕ ಶಿವಾಂಶು ರಜಪೂತ್ ನೇತೃತ್ವದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ಬೆಳ್ತಂಗಡಿ ತಾಲೂಕು ಮಡಂತ್ಯಾರು ಕುಕ್ಕಳ ಗ್ರಾಮದ ಅಳೆಕ್ಕಿ ಎಂಬಲ್ಲಿಂದ ಗುರುವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ: ಮೇ 4ರಂದು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಣಿಯೂರು ಮಸೀದಿಯ ಹಿಂಭಾಗದ ಸುಲೈಮಾನ್ ಫೈಝಿರವರ ಬಾಡಿಗೆ ಮನೆಯಲ್ಲಿ ವಾಸವಿರುವ ಕೂಲಿ ಕಾರ್ಮಿಕ ಸಂಜೀವ ಎಂಬುವರ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ನಡುವಿನ ಕೋಣೆಯಲ್ಲಿ ಪತ್ತೆಯಾಗಿದ್ದಳು. ಮಗಳ ಸಾವಿಗೆ ಕಣಿಯೂರು ತಲೆಕ್ಕಿಯ ಸಾಹುಲ್ ಹಮೀದ್ ಯಾನೆ ಕುಟ್ಟ ಪ್ರಚೋದನೆ ನೀಡಿರುವುದೇ ಕಾರಣ ಎಂದು ಆರೋಪಿಸಿ ಬಾಲಕಿಯ ತಂದೆ ದೂರು ನೀಡಿದ್ದಾರೆ.
ಸಂಘಟನೆಗಳ ಆಕ್ರೋಶ : ಘಟನೆಯ ತರುವಾಯ ಹಿಂದೂ ಸಂಘಟನೆಗಳು ಮೃತ ಬಾಲಕಿ ಮನೆಗೆ ಭೇಟಿ ನೀಡಿ ಇದೊಂದು ವ್ಯವಸ್ಥಿತ ಹತ್ಯೆ ಎಂದು ಆರೋಪಿಸಿದ್ದರು. ಪ್ರಮುಖರಾದ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿತ್ತು. ಶುಕ್ರವಾರ ಬೆಳಗ್ಗೆ ಶಾಸಕ ರಾಜೇಶ್ ನಾಯ್ಕ್ ಮತ್ತು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮೃತ ಬಾಲಕಿ ಮನೆಗೆ ಭೇಟಿ ನೀಡಿದ್ದರು. ಇದೇ ವೇಳೆ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಆರೋಪಿಯ ಪತ್ತೆಗೆ ಒತ್ತಾಯಿಸಿ ಮನವಿ ಮಾಡಿತ್ತು.
ಇದನ್ನೂ ಓದಿ:'ಎಲ್ಲರನ್ನೂ ಬಿಟ್ಟು ಬಾ, ಇಲ್ಲವೇ...'! ಬಂಟ್ವಾಳದಲ್ಲಿ ಬಾಲಕಿ ಆತ್ಮಹತ್ಯೆ; ತಂದೆ ಹೇಳಿದ್ದೇನು?