ಕರ್ನಾಟಕ

karnataka

ETV Bharat / city

ಪಬ್‌ನಲ್ಲಿ ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ; ಮಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದೇನು?

ಮದ್ಯ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಪಬ್‌ ಮೇಲೆ ದಾಳಿ ನಡೆಸಿರುವ ಬಜರಂಗದಳ ಕಾರ್ಯಕರ್ತರು, ವಿದ್ಯಾರ್ಥಿಗಳನ್ನು ಹೊರ ಕಳುಹಿಸಿದ್ದಾರೆ.

Police Commissioner who visited and inspected Mangalore Pub
ಮಂಗಳೂರು ಪಬ್​ಗೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸ್​ ಕಮಿಷನರ್​

By

Published : Jul 26, 2022, 7:48 AM IST

Updated : Jul 26, 2022, 12:32 PM IST

ಮಂಗಳೂರು: ನಗರದ ಪಬ್ ಒಂದಕ್ಕೆ ನಿನ್ನೆ ರಾತ್ರಿ ಬಜರಂಗದಳ ಕಾರ್ಯಕರ್ತರು ದಾಳಿ ಮಾಡಿ ಪಾರ್ಟಿ ಮಾಡುತ್ತಿದ್ದ ಯುವಕ-ಯುವತಿಯರನ್ನು ಹೊರಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಮಾತನಾಡಿದ ಅವರು, "5-6 ಜನ ಯುವಕರು ಪಬ್​ಗೆ ಬಂದು ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುತ್ತಿರುವುದಕ್ಕೆ ಬೌನ್ಸರ್ ದಿನೇಶ್ ಎಂಬವರನ್ನು ಪ್ರಶ್ನಿಸಿದ್ದಾರೆ. ಬೌನ್ಸರ್ ಈ ವಿಚಾರವನ್ನು ಮ್ಯಾನೇಜರ್​ಗೆ ತಿಳಿಸಿದ ನಂತರ ವಿದ್ಯಾರ್ಥಿಗಳ ವಯಸ್ಸಿನ ಐಡಿ ಪ್ರೂಫ್​ ಕೇಳಿದ್ದಾರೆ. ಆ ಬಳಿಕ ವಿದ್ಯಾರ್ಥಿಗಳು ಹೊರಹೋಗಿದ್ದಾರೆ. ಇದರ ಮಾಹಿತಿ ತಿಳಿದ ತಕ್ಷಣ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಿದ್ದಾರೆ" ಎಂದರು.

ಮಂಗಳೂರು ಪಬ್​ಗೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸ್​ ಕಮಿಷನರ್​

"ಬೌನ್ಸರ್ ನೀಡಿರುವ ಮಾಹಿತಿ ಪ್ರಕಾರ, ಪಬ್​ ಮೇಲೆ ಯಾವುದೇ ದಾಳಿ ಆಗಿಲ್ಲ. ಸಂಘಟನೆಯವರು ಬಂದು ಮಾಹಿತಿ ಕೇಳಿದ್ದಾರೆ. ನಿಖರವಾಗಿ ನಡೆದಿರುವುದೇನು ಎಂಬುದನ್ನು ತಿಳಿಯಲು ಪಬ್​ನ ಸಿಸಿಟಿವಿ ದೃಶ್ಯ ಪರಿಶೀಲಿಸಲಾಗುವುದು. ವಿದ್ಯಾರ್ಥಿಗಳ ಬಳಿಯೂ ನಡೆದ ಘಟನೆ ಬಗ್ಗೆ ಮಾಹಿತಿ ತೆಗೆದುಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಹೊರಗಿನಿಂದ ಬಂದು ಪರಿಶೀಲನೆ ಮಾಡಲು ಯಾರಿಗೂ ಅವಕಾಶ ಇಲ್ಲ. ಅಬಕಾರಿ ಮತ್ತು ಪೊಲೀಸ್ ಇಲಾಖೆ ನಿಯಮಿತವಾಗಿ ಪರಿಶೀಲಿಸುತ್ತದೆ. ಹೊರಗಿನಿಂದ ಬಂದು ಪರಿಶೀಲನೆ ಮಾಡಿದ ಬಗ್ಗೆ ಪರಿಶೀಲಿಸಲಾಗುವುದು" ಎಂದು ಅವರು ತಿಳಿಸಿದರು.

"ಕೆಲವೆಡೆ ಅಪ್ರಾಪ್ತರಿಗೆ ಮದ್ಯ ನೀಡುವ ಬಗ್ಗೆ ಮಾಹಿತಿ ಇತ್ತು. ಇದನ್ನು ನಿಯಮಿತವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಕಿಸ್ಸಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ಪಬ್​ಗೆ ಅಪ್ರಾಪ್ತರು ಬಂದರೆ ಅಪರಾಧಗಳು ನಡೆಯುವ ಸಾಧ್ಯತೆ ಇರುವುದರಿಂದ ಅದನ್ನು ಪರಿಶೀಲನೆ ನಡೆಸಲಾಗುವುದು. ಕಿಸ್ಸಿಂಗ್ ಪ್ರಕರಣದ ವಿದ್ಯಾರ್ಥಿಗಳಿಗೂ ಈ ವಿದ್ಯಾರ್ಥಿಗಳಿಗೂ ಸಂಬಂಧ ಇಲ್ಲ. ಕಿಸ್ಸಿಂಗ್ ಪ್ರಕರಣದ ವಿದ್ಯಾರ್ಥಿಗಳು ಕಸ್ಟಡಿಗೆ ಹೋಗುವ ಕಾರಣ ಈ ಪಾರ್ಟಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಸಂಬಂಧ ಕಂಡುಬಂದಿಲ್ಲ."

"ಬಾರ್ ರೂಲ್ಸ್ ಪ್ರಕಾರ 21 ವರ್ಷದವರೆಗೆ ಮದ್ಯ ಸರಬರಾಜು ಅವಕಾಶ ಇಲ್ಲ. ಬಾರ್​ನವರು ಪರಿಶೀಲಿಸಿದಾಗ ವಿದ್ಯಾರ್ಥಿಗಳು ತೃತೀಯ ವರ್ಷದ ಪದವಿಯವರು ಎಂದು ಹೇಳಿದ್ದಾರೆ. ಅದು ಸಾಧಾರಣವಾಗಿ ಅದೇ ವರ್ಷಕ್ಕೆ ಬರುತ್ತದೆ. ಅದರಲ್ಲಿ ಅಪ್ರಾಪ್ತ ವಯಸ್ಕರಿದ್ದರೆ ಪರಿಶೀಲಿಸಲಾಗುವುದು" ಎಂದು ಕಮೀಷನರ್ ಹೇಳಿದರು.

ಪಬ್‌ನಲ್ಲಿ ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ, ಕಳೆದ ರಾತ್ರಿ ನಡೆದ ಘಟನೆಯ ವಿಡಿಯೋ

ಘಟನೆಯ ಹಿನ್ನೆಲೆ: ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕುಡಿದು ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ಕಳೆದ ರಾತ್ರಿ ಇಲ್ಲಿನ ಪಬ್​ವೊಂದರ ಮೇಲೆ ದಾಳಿ ನಡೆಸಿದ್ದರು. ಕಾಲೇಜು ಫೇರ್​ವೆಲ್ ನೆಪದಲ್ಲಿ ಕುಡಿದು ಮೋಜು ಮಾಡುತ್ತಿದ್ದಾರೆ ಎಂದು ಆರೋಪಿಸಿ ಒಳಹೊಕ್ಕಿರುವ ಕಾರ್ಯಕರ್ತರು ಪಾರ್ಟಿ ನಿಲ್ಲಿಸಿ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಬಜರಂಗದಳದ ಕಾರ್ಯಕರ್ತರನ್ನು ಚದುರಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ :ರೈಲ್ವೆ ಹಳಿ ಮೇಲೆ ವಿದ್ಯಾರ್ಥಿ ಶವ ಪತ್ತೆ: ಆತಂಕ ಮೂಡಿಸಿದ ವಿದ್ಯಾರ್ಥಿಯ ಪೋಸ್ಟ್​​!

Last Updated : Jul 26, 2022, 12:32 PM IST

ABOUT THE AUTHOR

...view details