ಮಂಗಳೂರು: ಅಕ್ರಮ ಮರಳುಗಾರಿಕೆಯ ಕುರಿತಂತೆ ವರದಿ ಮಾಡಲು ತೆರಳಿದ್ದ ಖಾಸಗಿ ಸುದ್ದಿವಾಹಿನಿಯ ವರದಿಗಾರನ ಮೇಲೆ ಸುಮಾರು 15 ಮಂದಿಯ ತಂಡ ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳದ ಕೋರಿಯರ್ ಹೊಳೆ ಸಮೀಪ ನಡೆದಿದೆ.
ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಸುದ್ದಿವಾಹಿನಿಯ ವರದಿಗಾರ ಹಾಗೂ ಪೆರಾಬೆ ಗ್ರಾಮದ ಇಡಾಲ ಗುಡ್ಡಪ್ಪ ಗೌಡರ ಪುತ್ರ ಗಣೇಶ್(24) ಹಲ್ಲೆಗೊಳಗಾದವರು. ಇವರು ಪುತ್ತೂರು ಮಹಾವೀರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಡಬದ ಕೋರಿಯಾರ್ ಎಂಬಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿಯಿತ್ತಂತೆ. ಅದರ ಬಗ್ಗೆ ಖಚಿತ ವಿವರ ಪಡೆದು, ಮರಳುಗಾರಿಕೆಯ ವಿಡಿಯೋ ಚಿತ್ರೀಕರಣಕ್ಕೆ ಮಾರುತಿ ಓಮ್ನಿಯಲ್ಲಿ ನದಿಯ ಸಮೀಪ ಗಣೇಶ್ ಹಾಗೂ ಅವರ ತಂಡ ತೆರಳಿತ್ತು. ಈ ಸಂದರ್ಭ ಮರಳುಗಾರಿಕೆಯಲ್ಲಿ ನಿರತರಾಗಿದ್ದ ಗಣೇಶ್ ಹಾಗೂ ಅಜಯ್ ಸೇರಿದಂತೆ ಸುಮಾರು 15 ಮಂದಿಯ ತಂಡ, ತಮ್ಮ ಮೇಲೆ ಹಲ್ಲೆ ಮಾಡಿದೆ. ಈ ಸಂದರ್ಭ ಜೊತೆಯಲ್ಲಿದ್ದ ಶರತ್ ಎಂಬುವರು ಓಡಿಹೋಗಿ ತಪ್ಪಿಸಿಕೊಂಡಿದ್ದು, ತನ್ನ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಕ್ಯಾಮರಾ ಹಾಗೂ ಮೊಬೈಲ್ಗಳನ್ನು ಕಿತ್ತು ಹಾನಿಗೊಳಿಸಿದ್ದಾರೆ ಎಂದು ಗಾಯಾಳು ಗಣೇಶ್ ಆರೋಪಿಸಿದ್ದಾರೆ.
ಸುಬ್ರಹ್ಮಣ್ಯ ರಸ್ತೆ ಕಾಮಗಾರಿಗೆ ಮರಳು ತೆಗೆಯಲು ಅನುಮತಿ ನೀಡಲಾಗಿದ್ದರೂ, ಇಲ್ಲಿ ಕಾನೂನು ಬಾಹಿರವಾಗಿ ಮರಳನ್ನು ಬೇರೆ ಕಡೆ ಸಾಗಾಟ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ವರದಿ ಮಾಡಿರುವುದಕ್ಕೆ ಅವರು ನನಗೆ ಜೀವ ಬೆದರಿಕೆ ಹಾಕಿದ್ದರು. ಇದರ ಬಗ್ಗೆ ಕಡಬ ಠಾಣೆಗೆ ದೂರು ಕೂಡಾ ನೀಡಿದ್ದು, ಅಲ್ಲಿ ಪ್ರಕರಣ ದಾಖಲಾಗಿದೆ ಎಂದು ಗಣೇಶ್ ತಿಳಿಸಿದ್ದಾರೆ.
ಡಿವೈಎಸ್ಪಿ ಮುರಳೀಧರ, ಕಡಬ ಠಾಣಾ ಎಸ್ಐ ಪ್ರಕಾಶ್ ದೇವಾಡಿಗ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸುತ್ತಿದ್ದಾರೆ. ಹಲ್ಲೆಯನ್ನು ಖಂಡಿಸಿರುವ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಮಾತನಾಡಿ, ಮಾಹಿತಿ ಬಂದಾಕ್ಷಣ ಎಸ್ಪಿ ಜೊತೆಯಲ್ಲಿ ಮಾತನಾಡಿದ್ದೇನೆ. ಯಾರೇ ಆದರೂ ಅವರನ್ನು ತಕ್ಷಣ ಬಂಧಿಸಿ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ. ವರದಿಗಾರರ ಮೇಲೂ ಹಲ್ಲೆ ಮಾಡುವಂತಹ ಧೈರ್ಯ ಯಾರಿಗೂ ಬರಬಾರದು ಎಂದು ಹೇಳಿದರು.