ಉಪ್ಪಿನಂಗಡಿ(ದಕ್ಷಿಣ ಕನ್ನಡ):ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಸಾಕು ಕರು ತೆಗೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಬಜರಂಗ ದಳದ ಕಾರ್ಯಕರ್ತರು ಮಹಿಳೆ ಮೇಲೆ ಹಲ್ಲೆ ಮಾಡಿ, ಕಿರುಕುಳ ನೀಡಿರುವ ವರದಿಗಳನ್ನು ಕೇಳಿ ಅತೀವ ಬೇಸರವಾಗಿದೆ. ಬಜರಂಗದಳದ ಕಾರ್ಯಕರ್ತರು ರಣಹದ್ದುಗಳ ರೀತಿ ವರ್ತಿಸುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಕಾನೂನು, ಸುವ್ಯವಸ್ಥೆ ವ್ಯವಸ್ಥಿತವಾಗಿಲ್ಲ. ಇದು ಕರ್ನಾಟಕದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಲಿ. ಬಿಜೆಪಿಯು ನಕಲಿ ಚೌಕಿದಾರರಿಂದ ತುಂಬಿದೆ ಮತ್ತು ಕರ್ನಾಟಕವು ಯುಪಿಯಂತಾಗುವುದನ್ನು ತಪ್ಪಿಸಲು ಬದಲಾವಣೆಯ ಅಗತ್ಯವಿದೆ ಎಂದಿದ್ದಾರೆ.