ಉಪ್ಪಿನಂಗಡಿ/ದಕ್ಷಿಣಕನ್ನಡ :ವರದಿ ಸಂಗ್ರಹಿಸಲು ತೆರಳಿದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯೊಂದರ ವರದಿಗಾರ ಮಂಗಳೂರು ಕೋಟೆಕಾರ್ ಮಾಡೂರು ನಿವಾಸಿ ಅಜಿತ್ ಕುಮಾರ್ (44) ಎಂಬುವರು ದೂರು ನೀಡಿದ್ದಾರೆ. ದೂರಿನನ್ವಯ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಲವು ಮಂದಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಹಿಜಾಬ್ ಸಂಘರ್ಷ ಉಂಟಾಗಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಕಾಲೇಜು ಪ್ರಾಂಶುಪಾಲರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡು ಹಿಂತಿರುಗುವ ಸಮಯಯದಲ್ಲಿ ಸುಮಾರು 25 ವಿದ್ಯಾರ್ಥಿಗಳ ಗುಂಪು ಮಾಧ್ಯಮ ಪ್ರತಿನಿಧಿಗಳನ್ನು ಸುತ್ತುವರೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಅಲ್ಲದೇ ಕಾಲೇಜಿನ ಕ್ಯಾಂಪಸ್‌ನಲ್ಲಿ ದಿಗ್ಬಂಧನ ವಿಧಿಸಿದ್ದರು. ಈ ವಿಚಾರವನ್ನು ಹೊರಗಡೆ ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಗಿ ಅಜಿತ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ 68/2022ಕಲಂ: 143,323,342,506 ಹಾಗೂ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಖಂಡನೆ :ಕಾಲೇಜಿಗೆ ಪತ್ರಕರ್ತರು ವಾಸ್ತವ ವರದಿ ಮಾಡಲು ತೆರಳಿದಾಗ ವಿದ್ಯಾರ್ಥಿಗಳು ದುವರ್ತನೆ ತೋರಿಸಿದ್ದಾರೆ. ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಈ ರೀತಿಯ ಘಟನೆಗಳು ಮುಂದಕ್ಕೆ ಮರುಕಳಿಸದಂತೆ ಸರ್ಕಾರ ಪತ್ರಕರ್ತರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮನವಿ ಮಾಡಿದ್ದಾರೆ.
ಘಟನಾವಳಿಗೆ ಸಂಬಂಧಿಸಿದಂತೆ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ತಪ್ಪಿತಸ್ಥತರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಪತ್ರಕರ್ತರ ಹಲ್ಲೆಯನ್ನು ಖಂಡಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಇಂದು ಬೆಳಗ್ಗೆ 10.30ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.