ಮಂಗಳೂರು :ಸ್ವಂತ ತಂದೆಯೇ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಂಗಳೂರಿನ ಜಪ್ಪಿನಮೊಗರು ಕೊಪ್ಪರಿಗೆಗುತ್ತು ಎಂಬಲ್ಲಿ ನಡೆದಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಹೋದಾಗ ಪ್ರಕರಣವು ಮನೆಯ ಒಳಗಿನವರಿಂದಲೇ ಆಗಿದೆ ಎಂದು ತಿಳಿದು ಬಂದಿತ್ತು. ತನಿಖೆ ನಡೆಸಿದಾಗ ತಂದೆಯೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಕೊಪ್ಪರಿಗೆಗುತ್ತು ನಿವಾಸಿ ವಿಶ್ವನಾಥ ಶೆಟ್ಟಿ (52) ಬಂಧಿತ ಆರೋಪಿ. ಸಾಕು ದನಗಳನ್ನು, ಕೋಳಿಗಳನ್ನು ಮನೆಯ ಹೊರಗಡೆ ಕಟ್ಟಿ ಹಾಕಿರುವ ವಿಚಾರದಲ್ಲಿ ತಂದೆ-ಮಗನ ನಡುವೆ ಸಂಘರ್ಷ ಏರ್ಪಟ್ಟಿತು. ಕುಪಿತಗೊಂಡ ತಂದೆ ವಿಶ್ವನಾಥ ಶೆಟ್ಟಿ, ಮಗ ಸ್ವಾಮಿತ್ ಶೆಟ್ಟಿ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಇದೀಗ ಸ್ವಾಮಿತ್ ಶೆಟ್ಟಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಂಕನಾಡಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಇಬ್ಬರು ದರೋಡೆಕೋರರ ಬಂಧನ :ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್ವೆಲ್ ಎಂಬಲ್ಲಿ ಕಟ್ಟಡ ಕಾರ್ಮಿಕರನ್ನು ದರೋಡೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಓರ್ವ ಆರೋಪಿಯನ್ನು ಕಟ್ಟಡ ಕಾರ್ಮಿಕರೇ ಸ್ಥಳೀಯರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳಲ್ಲಿ ಓರ್ವ ಮುಕ್ಕಚ್ಚೇರಿ ಉಳ್ಳಾಲ ಭಾಗದವನಾಗಿದ್ದು, ಮತ್ತೋರ್ವ ಮಂಜನಾಡಿ ನಿವಾಸಿಯಾಗಿದ್ದಾನೆ. ಹಣದ ತೊಂದರೆಯಲ್ಲಿದ್ದ ಇವರು, ರಾತ್ರಿ ಜನ ಸಂಚಾರವಿಲ್ಲದ ಕಡೆಗಳಲ್ಲಿ ಹಣ, ಮೊಬೈಲ್ ದರೋಡೆ ಮಾಡುವ ಕೃತ್ಯದಲ್ಲಿ ತೊಡಗಿದ್ದರೆಂದು ತನಿಖೆಯ ವೇಳೆ ಬಾಯಿಬಿಟ್ಟಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿ, ಯಾರಾದರೂ ಮನೆಗಳ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿರುವುದು, ಅಪರಿಚಿತರು ಯಾರಾದರೂ ಹೊಂಚು ಹಾಕುತ್ತಿರುವಂತೆ ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.