ಸುಳ್ಯ (ದಕ್ಷಿಣ ಕನ್ನಡ) : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ಇಂದು ಕಸ ಸಂಗ್ರಹದಲ್ಲಿ ಮಾದರಿ ಗ್ರಾಮ ಪಂಚಾಯತ್ ಆಗಿ ಹೊರಹೊಮ್ಮಿದೆ. ಇಲ್ಲಿನ ಸ್ವಸಹಾಯ ಸಂಘದ ಮಹಿಳೆಯರು ಸ್ವ-ಇಚ್ಛೆಯಿಂದಲೇ ಕಸ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. 2019ರ ವಿಶ್ವ ಪರಿಸರ ದಿನದಂದು ಜಿಲ್ಲಾ ಪರಿಸರ ಪ್ರಶಸ್ತಿಯನ್ನು ಈ ಗ್ರಾಮ ಪಂಚಾಯತ್ ಗಳಿಸಿದ್ದು, ಇಂದು ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ಸ್ವಚ್ಛತಾ ಪಾಲನೆಯಲ್ಲಿ ಮುಂಚೂಣಿಯಲ್ಲಿದೆ.
ಮಹಿಳೆಯರ ಸಾಧನೆ : ಸ್ವಸಹಾಯ ಸಂಘದ ಮೂಲಕ ಪಂಚಾಯತಿನ ಕಸ ನಿರ್ವಹಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 37 ಘನ ತ್ಯಾಜ್ಯ ಘಟಕಗಳು ಕಾರ್ಯಾಚರಿಸುತ್ತಿದ್ದು, ಇದರಲ್ಲಿ ಸುಳ್ಯದ ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಮನೆ-ಮನೆಗಳಿಂದ ತ್ಯಾಜ್ಯ ಸಂಗ್ರಹ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಈ ಪಂಚಾಯತ್ ನಲ್ಲಿ ಕಸ ಸಂಗ್ರಹ, ವಾಹನ ಚಾಲನೆ, ಮತ್ತು ಕಸವನ್ನು ವ್ಯಾವಸಾಯಿಕ ರೀತಿಯಲ್ಲಿ ಮರುಬಳಕೆ ಮಾಡುವ ಕೆಲಸವನ್ನು ಮಾಡುತ್ತಿರುವುದು ಒಂದು ಮಹಿಳಾ ಸ್ವ-ಸಹಾಯ ತಂಡ. ತಮ್ಮ ಈ ಕಾರ್ಯಕ್ಕೆ ಗ್ರಾಮದ ಜನರು ಒಳ್ಳೆಯ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದು ಈ ತಂಡದ ಮೇಲ್ವಿಚಾರಕಿ ಸೌಮ್ಯಲತಾ ಹೇಳಿದ್ದಾರೆ.
ಮಹಿಳೆಯರಿಂದಲೇ ಎಲ್ಲಾ ಕೆಲಸದ ನಿರ್ವಹಣೆ : ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಸ್ವ ಸಹಾಯ ಸಂಘಗಳ ಅಧಿನಿಯಮ ಪ್ರಕಾರ ನೋಂದಾವಣೆ ಆಗಿರುವ ಘನ ಮತ್ತು ದ್ರವಸಂಪನ್ಮೂಲ ನಿರ್ವಹಣಾ ಸಂಘ (ರಿ ) ಎಂಬ ಹೆಸರಿನ 5 ಜನ ಮಹಿಳಾ ಸದಸ್ಯರ ತಂಡವು ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಮಹಿಳೆಯರೇ ಈ ಎಲ್ಲಾ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ. ಸುಮಲತಾ ಎಂಬವರು ವಾಹನ ಚಾಲನಾ ತರಬೇತಿ ಪಡೆದಿದ್ದು, ಕಸ ಸಾಗಾಟದ ವಾಹನವನ್ನು ಚಲಾಯಿಸುತ್ತಾರೆ. ವಿಜಯಲಕ್ಷ್ಮಿ, ಶಾಲಿನಿ, ಜಲಜಾಕ್ಷಿ ಎಂಬ ಸದಸ್ಯರು ಸ್ವಚ್ಛತಾ ತಂಡದಲ್ಲಿದ್ದಾರೆ.
ಇವರು ತಾವು ತಮ್ಮ ಗ್ರಾಮದಿಂದ ಸಂಗ್ರಹಿಸುವ ತ್ಯಾಜ್ಯಗಳನ್ನು ಸಂರಕ್ಷಣಾ ಘಟಕಕ್ಕೆ ತಂದು ಅದನ್ನು ಮರುಬಳಕೆಗೆ ಅನುಕೂಲವಾದ ರೀತಿಯಲ್ಲಿ ಯಾಂತ್ರೀಕೃತವಾಗಿ ಪ್ಯಾಕ್ ಮಾಡಿ, ನಂತರ ಅದನ್ನು ಮಾರಾಟ ಮಾಡುತ್ತಾರೆ. ಇದರಿಂದ ಬರುವ ಆದಾಯವನ್ನು ತಾವೇ ತೆರೆದಿರುವ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಾರೆ.ಬಳಿಕ ತಿಂಗಳ ಅಂತ್ಯದಲ್ಲಿ ತಮಗೆ ಬೇಕಾದ ಸಂಬಳವನ್ನು ಇದರಿಂದಲೇ ಪಡೆಯುತ್ತಾರೆ. ಸಂಬಳದ ಮೊತ್ತ ಕಡಿಮೆಯಾದರೆ ಗ್ರಾಮ ಪಂಚಾಯತ್ ಕಡೆಯಿಂದ ನೀಡಲಾಗುತ್ತದೆ. ಇವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಉತ್ತಮ ಸಹಕಾರವನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.
ಓದಿ :ಮಂಗಳೂರು: ಸ್ಟೇರಿಂಗ್ ರಾಡ್ ಕಟ್ ಆಗಿ ಬಸ್ ಪಲ್ಟಿ, ನಾಲ್ವರಿಗೆ ಗಾಯ