ಮಂಗಳೂರು: ಮತಾಂತರ ನಿಷೇಧ ವಿಧೇಯಕಕ್ಕೆ ಆಕ್ಷೇಪಣೆಗಳು ಸಹಜ. ಮುಂದಿನ ಚುನಾವಣೆಗೆ ವೋಟ್ ಬ್ಯಾಂಕ್ ಅನ್ನು ಭದ್ರ ಮಾಡುತ್ತಾ ಹೋದಲ್ಲಿ 1947ರಲ್ಲಿ ದೇಶವು ಧರ್ಮದ ಆಧಾರದ ಮೇಲೆ ಒಡೆದು ಹೋದಂತೆ ಊರಿಗೆ ಊರೇ ಒಡೆಯಲು ಆರಂಭವಾದೀತು. ಆದ್ದರಿಂದ ಈ ಬಗ್ಗೆ ರಾಜಕೀಯವಾಗಿ ಚಿಂತನೆ ಮಾಡದಿದ್ದಲ್ಲಿ ದೇಶಕ್ಕೆ ಭವಿಷ್ಯವಿಲ್ಲದಾದೀತು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ದೇಶದ ಹಿತದೃಷ್ಟಿಯಿಂದ ಇಂತಹ ಕಾನೂನು, ವಿಧೇಯಕಗಳ ಜಾರಿ ಅಗತ್ಯವಿದೆ. ಈಶ್ವರಪ್ಪನವರು ಆ ಹಿನ್ನೆಲೆಯಲ್ಲಿ ಇಂತಹ ಕಾನೂನುಗಳನ್ನು ಇನ್ನೂ ಜಾರಿಗೊಳಿಸುತ್ತೇವೆ ಅಂದಿದ್ದಾರೆ. ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ನಾವು ಮಾತ್ರ ತರಲು ಸಾಧ್ಯವಾಗಿದೆ.
ಯಾರು ಒಂದು ಸಮುದಾಯದ ವೋಟ್‌ಗೋಸ್ಕರ ಹಲ್ಲುಗಿಂಜಿ ನಿಂತಿರುತ್ತಾರೋ ಅವರಿಂದ ಇದನ್ನು ತರಲು ಸಾಧ್ಯವಿಲ್ಲ. ದೇಶದ ಹಿತವನ್ನು ಕಡೆಗಣಿಸಿ ತಮ್ಮ ರಾಜಕೀಯ ಭದ್ರತೆ, ಸಿಂಹಾಸನ ಗಟ್ಟಿ ಮಾಡುವ ಮಾನಸಿಕತೆ ರಾಜಕೀಯದಲ್ಲಿ ಎಲ್ಲಿವರೆಗೆ ಇರುತ್ತೋ ಅಲ್ಲಿವರೆಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ.. ಮತಾಂತರ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ನಾವೆಲ್ಲರೂ ಸೇರಿ ಪಕ್ಷವನ್ನು ಮೀರಿ ಯೋಚನೆ ಮಾಡಿ ಈ ಕಾನೂನು ಜಾರಿಗೆ ತಂದಿದ್ದೇವೆ. ಈ ವಿಧೇಯಕ ಯಾಕೆ ಜಾರಿಗೊಳಿಸಿದ್ದೇವೆ ಅಂದರೆ ನಮ್ಮ ದೇಶದ ಧಾರ್ಮಿಕ, ಸಾಂಸ್ಕೃತಿಕ ಚೌಕಟ್ಟು ಎಲ್ಲಾ ಧರ್ಮವನ್ನು ಪ್ರೀತಿಸುತ್ತದೆ.
ಇಂತಹ ಉತ್ತಮ ವೃಕ್ಷಕ್ಕೆ ಗೆದ್ದಲು ರೀತಿಯಲ್ಲಿ ಮತಾಂತರ ಬಂದು ಸೇರಿದೆ. ಅದು ಆ ವೃಕ್ಷದ ಸಾರವನ್ನು ಹೀರಿ ಅದನ್ನೇ ಸಾಯಿಸುವ ಮಟ್ಟಕ್ಕೆ ಬೆಳೆದಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಉಪ್ಪಿನಂಗಡಿ ಪ್ರಕರಣದಲ್ಲಿ ಪೊಲೀಸರು ಉತ್ತಮವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಬಹಳ ಶಾಂತಿಯಿಂದ ಸಹನೆಯಿಂದ ವರ್ತಿಸಿದ್ದಾರೆ. ನಾಗರಿಕರೊಂದಿಗೆ ಸಂಘರ್ಷ ಬೇಡ ಎಂದು ತಮ್ಮ ಮೇಲೆ ಹಲ್ಲೆ ಆಗುವವರೆಗೂ ಅವರು ಸುಮ್ಮನಿದ್ದರು. ಆದರೆ, ಕಾನೂನನ್ನು ಯಾರು ಕೈಗೆತ್ತಿಕೊಳ್ಳುತ್ತಾರೋ ಅವರನ್ನು ಪೊಲೀಸರು ಬಿಡೋದಿಲ್ಲ ಎಂದು ಹೇಳಿದರು.
ನಕ್ಸಲರು ಶರಣಾಗುತ್ತಿರುವುದರಿಂದ ಎಎನ್ಎಫ್ ಪಡೆಯನ್ನು ಹಿಂಪಡೆಯುವ ಆಲೋಚನೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಒಂದೇ ಬಾರಿಗೆ ಹಿಂಪಡೆಯಲು ಆಗುವುದಿಲ್ಲ. ನಕ್ಸಲ್ ಚಟುವಟಿಕೆ ಸಂಪೂರ್ಣ ನಿರ್ಣಾಮ ಆಗುವವರೆಗೆ ಕಾಯಬೇಕಾಗುತ್ತದೆ. ಹೆಚ್ಚಿನ ನಕ್ಸಲ್ ಮುಖ್ಯಸ್ಥರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಆದರೆ, ನಕ್ಸಲ್ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗುವವರೆಗೆ ಈ ವ್ಯವಸ್ಥೆ ಮುಂದುವರೆಯುತ್ತದೆ. ಆದರೆ, ಈ ಬಗ್ಗೆ ಚಿಂತನೆ ಇದೆ ಎಂದು ಹೇಳಿದರು.