ಮಂಗಳೂರು:ಮತಾಂತರ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಆದಷ್ಟು ಶೀಘ್ರವೇ ಕಾಯ್ದೆಯಾಗಿ ಜಾರಿಯಾಗಲೆಂದು ಆಶಿಸುತ್ತೇವೆ ಎಂದು ಪೇಜಾವರದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಮತಾಂತರದ ಹಾವಳಿಯಿಂದ ಕುಟುಂಬಗಳು ಒಡೆಯುತ್ತಿದೆ. ಪತಿ- ಪತ್ನಿಯರು ಬೇರೆಯಾಗುತ್ತಿದ್ದಾರೆ. ತಂದೆ - ತಾಯಿ - ಮಕ್ಕಳು ಬೇರೆಯಾಗುತ್ತಿದ್ದಾರೆ. ಅಷ್ಟೇ ಅಲ್ಲ ಕುಟುಂಬವೇ ಸರ್ವನಾಶವಾಗುತ್ತಿರುವುದನ್ನು ನಾವು ನಗರದೊಳಗಡೆಯೇ ಕಾಣುತ್ತಿದ್ದೇವೆ ಎಂದರು.
ಮತಾಂತರ ನಿಷೇಧ ವಿಧೇಯಕ ಶೀಘ್ರವೇ ಕಾಯ್ದೆಯಾಗಿ ಜಾರಿಗೆ ಬರಲಿ: ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ ಇದೆಲ್ಲವೂ ಕಣ್ಣಿಗೆ ಕಾಣುತ್ತಿರುವ ಮತಾಂತರದ ಪರಿಣಾಮಗಳಷ್ಟೇ, ಹಿಂಬದಿಯಿಂದ ಇದರ ಅನರ್ಥಗಳು ಅನೇಕ ಇವೆ. ಹಾಗಾಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಮತಾಂತರಕ್ಕೆ ಕಡಿವಾಣ ಅವಶ್ಯವಾಗಿ ಬೇಕು ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಬಂದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲಾಗುತ್ತದೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀಗಳು, ಅದು ಅವರಿಗೆ ಬಿಟ್ಟದ್ದು. ಆದರೆ, ನಾವಂತೂ ಈ ಕಾಯ್ದೆ ಜಾರಿಯಾಗಲಿ ಎಂದು ಸಮರ್ಥನೆ ಮಾಡುತ್ತಿದ್ದೇವೆ ಎಂದರು.
ಪತ್ರಿಕೆಯಲ್ಲಿ ಓದಿದ ಪ್ರಕಾರ ಸಿದ್ದರಾಮಯ್ಯ ಬಲವಂತದ, ಆಸೆ ಆಮಿಷಗಳನ್ನೊಡ್ಡಿ ಮಾಡುವ ಮತಾಂತರವನ್ನು ತಾವೂ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಾವು ಹರ್ಷದಿಂದ ಸ್ವಾಗತಿಸುತ್ತೇವೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಹೇಳಿದರು.
ಇದನ್ನೂ ಓದಿ:ಆಂಧ್ರದ ಗುಂಟೂರು ಯುವಕನೊಂದಿಗೆ ಟರ್ಕಿಯ ಯುವತಿಗೆ ಪ್ರೇಮಾಂಕುರ: ಏಕ್ ಶಾದಿ ಕಹಾನಿ