ಮಂಗಳೂರು: ಸುಪ್ರೀಂಕೋರ್ಟ್ ಆದೇಶದಂತೆ ದೇವಸ್ಥಾನ ತೆರವು ಮಾಡಲು ಮುಂದಾಗುವ ಸರ್ಕಾರ 21 ವರ್ಷಗಳ ಹಿಂದೆ ಇದೇ ಸುಪ್ರೀಂಕೋರ್ಟ್ ನೀಡಿರುವ ಶಬ್ದಮಾಲಿನ್ಯ ನಿಯಂತ್ರಣ ಆದೇಶ ಪಾಲಿಸಲಿ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಆಗ್ರಹಿಸಿದ್ದಾರೆ.
ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನ ತೆರವು ಮಾಡುವ ಮೂಲಕ ಬಹಳ ದೊಡ್ಡ ರಾದ್ಧಾಂತಕ್ಕೆ ರಾಜ್ಯ ಸರ್ಕಾರ ಕೈ ಹಾಕಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ನ ಆದೇಶ ಎಂದು ಹೇಳಲಾಯಿತು. ಇದೇ ಸುಪ್ರೀಂಕೋರ್ಟ್ 21 ವರ್ಷಗಳ ಹಿಂದೆ ರಾತ್ರಿ 10 ಗಂಟೆ ಬಳಿಕ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಶಬ್ದ ಮಾಲಿನ್ಯ ಮಾಡಬಾರದು ಎಂದು ಆದೇಶಿಸಿತ್ತು.
ಆದರೆ, 21 ವರ್ಷಗಳ ಹಿಂದೆ ಕೊಟ್ಟ ಈ ಆದೇಶವನ್ನು ಪರಿಪಾಲನೆ ಮಾಡಲಾಗುತ್ತಿಲ್ಲ. ಅದರ ನಂತರ ಬಂದ ಆದೇಶವನ್ನು ಪಾಲನೆ ಮಾಡಲು ಹೊರಟಿದ್ದಾರೆ. ರಾಜ್ಯ ಸರ್ಕಾರ ಮೊದಲು ಸುಪ್ರೀಂ ಕೊಟ್ಟಿರುವ ಶಬ್ದಮಾಲಿನ್ಯ ನಿಯಂತ್ರಣದ ಆದೇಶ ಪಾಲನೆ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಆನ್ಲೈನ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದ ಗೃಹ ಸಚಿವ
ಈ ಆದೇಶ ಇದ್ದರೂ ದೇಶಾದ್ಯಂತ ರಾತ್ರಿಯಿಂದ ಬೆಳಗ್ಗೆಯವರೆಗೆ ಮೈಕ್ಗಳನ್ನು ಬಳಸಲಾಗುತ್ತದೆ. ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಶ್ರೀರಾಮ ಸೇನೆ ಉಗ್ರ ಹೋರಾಟ ಕೈಗೊಳ್ಳಲಿದೆ. ಆ ಆದೇಶವನ್ನು ಪಾಲನೆ ಮಾಡುವ ಮೂಲಕ ಕರ್ನಾಟಕ ರಾಜ್ಯದ ಜನರ ಹಿತವನ್ನು ಸರ್ಕಾರ ಕಾಪಾಡಲಿ ಎಂದರು.