ಮಂಗಳೂರು:ಶ್ರೀರಾಮಸೇನೆ ಆಜಾನ್ ವಿರುದ್ಧ ಹೋರಾಟ ಮಾಡುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶ ಪಾಲನೆಗಾಗಿ ಹೋರಾಟ ಮಾಡುತ್ತಿದೆ ಎಂದು ಶ್ರೀರಾಮಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಜಾನ್ಗೆ ಬಳಸುವ ಧ್ವನಿವರ್ಧಕ ತೆಗೆಯಲು ನಾವು ಮೇ 9 ತಾರೀಕಿನವರೆಗೆ ಗಡುವನ್ನು ನೀಡಿದ್ದೆವು. ಆಜಾನ್ ಧ್ವನಿವರ್ಧಕ ಸ್ಥಗಿತಗೊಳಿಸಲು ಎಲ್ಲ ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ನೀಡಿದ್ದೇವೆ. ಆದರೆ, ಯಾವುದೇ ಫಲ ದೊರಕದ ಹಿನ್ನೆಲೆಯಲ್ಲಿ ನಾವು ಅಂದು ಪ್ರತಿಭಟನಾರ್ಥವಾಗಿ ಆಜಾನ್ನಷ್ಟೇ ದೊಡ್ಡ ಶಬ್ದದಲ್ಲಿ ಸುಪ್ರಭಾತ, ಓಂಕಾರ ನಾದವನ್ನು ಹಾಕಿದ್ದೆವು ಎಂದು ಹೇಳಿದರು.
ಎಲ್ಲರಿಗೂ ನಿಯಮ ಒಂದೇ:ಯಕ್ಷಗಾನದಲ್ಲಿ ಮೈಕ್ ಬಳಸುವ ವಿಚಾರವು ಯಕ್ಷಗಾನ ವೀಕ್ಷಕರು, ಸಂಘಟಕರಿಗೆ ಸಂಬಂಧಪಟ್ಟದ್ದಾಗಿದೆ. ಯಕ್ಷಗಾನ ನಡೆಯುವ ಸಂದರ್ಭ ವೀಕ್ಷಕರಿಗೆ ಮಾತ್ರ ಮೈಕ್ನ ಅವಶ್ಯಕತೆ ಇರುತ್ತದೆ. ಅಲ್ಲದೇ, ಯಕ್ಷಗಾನ ಆಯೋಜಕರಿಗೆ ಮೈಕ್ ಅನುಮತಿ ಪಡೆಯಲು 15 ದಿನಗಳ ಕಾಲಾವಕಾಶ ಇರುತ್ತದೆ. ಸುಪ್ರೀಂಕೋರ್ಟ್ ಆದೇಶ ಎಲ್ಲರಿಗೂ ಅನ್ವಯವಾಗುವ ಹಿನ್ನೆಲೆಯಲ್ಲಿ ಎಲ್ಲರೂ ಪಾಲನೆ ಮಾಡಬೇಕಾಗಿದೆ ಎಂದರು.