ಪುತ್ತೂರು(ದಕ್ಷಿಣ ಕನ್ನಡ):ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಿಸಿದ ಬಳಿಕ ಅಂಬಿಕಾ ಮಹಾವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ್ ಅವರು ಇತ್ತೀಚಿಗೆ ಜಮ್ಮುವಿಗೆ ಭೇಟಿ ನೀಡಿದ್ದರು. ಅಲ್ಲಿನ ಪರಿಸ್ಥಿತಿಯನ್ನು ಕಂಡ ಬಳಿಕ ದೇಶದ ಎಲ್ಲೆಡೆ ಇರುವ ಕಾಶ್ಮೀರಿ ಪಂಡಿತರ ಮಕ್ಕಳಿಗೆ 6ನೇ ತರಗತಿಯಿಂದ ಪದವಿವರೆಗೆ ಉಚಿತ ಶಿಕ್ಷಣವನ್ನು ನೀಡುವ ನಿರ್ಧಾರ ಮಾಡಿದ್ದಾರೆ. ಅದಲ್ಲದೇ ವಿದ್ಯಾರ್ಥಿಗಳಿಗೆ ವಸತಿ, ಆರೋಗ್ಯದ ವ್ಯವಸ್ಥೆಯನ್ನು ಒದಗಿಸುವ ಯೋಜನೆಯನ್ನು ರೂಪಿಸಿದ್ದಾರೆ.
ಸಾಮಾನ್ಯವಾಗಿ ಅಂಬಿಕಾ ಮಹಾವಿದ್ಯಾಲಯದ ವಸತಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗೆ ವಾರ್ಷಿಕವಾಗಿ 80 ಸಾವಿರ ರೂಪಾಯಿಗಳನ್ನು ಭರಿಸಲಾಗುತ್ತದೆ. ಉಳಿದ ವ್ಯವಸ್ಥೆಗಳಿಗೆ 40 ಸಾವಿರ ರೂಪಾಯಿಗಳ ವೆಚ್ಚ ತಗುಲುತ್ತದೆ. ಒಟ್ಟಾರೆ ಒಬ್ಬ ವಿದ್ಯಾರ್ಥಿಗೆ ಅಂಬಿಕಾ ವಸತಿ ಶಾಲೆಯಲ್ಲಿ ಕಲಿಯಲು 1.20 ಲಕ್ಷ ವೆಚ್ಚ ತಗಲುತ್ತಿದ್ದು, ಕಾಶ್ಮೀರಿ ಪಂಡಿತರ ಮಕ್ಕಳ ಈ ಎಲ್ಲಾ ಖರ್ಚನ್ನು ವಿದ್ಯಾಲಯವೇ ಭರಿಸಲಿದೆ. ಸದ್ಯ ನಾಲ್ವರು ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಅಂಬಿಕಾ ಮಹಾವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ್ ತಿಳಿಸಿದ್ದಾರೆ.