ಬಂಟ್ವಾಳ (ದಕ್ಷಿಣ ಕನ್ನಡ):ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಗೌರವ ಪ್ರಶಸ್ತಿ ನೀಡಿತ್ತು. ತನಗೆ ಅಕ್ಷರಭ್ಯಾಸ ಗೊತ್ತಿಲ್ಲ. ಆದ್ರೆ ತನ್ನಂತೆ ಇತರರು ಕಷ್ಟ ಪಡಬಾರದೆಂದು ಹಣ್ಣಿನ ವ್ಯಾಪಾರ ಮಾಡಿ ಬಂದ ಹಣದಲ್ಲೇ ಶಾಲೆ ಕಟ್ಟಿಸಿದ ಹರೇಕಳ ಹಾಜಬ್ಬ ಅವರಿಗೆ ಈ ಗೌರವ ಅರಸಿ ಬಂದಿತ್ತು. ಅದೇ ರೀತಿ ಈ ಬಾರಿಯೂ ಅಕ್ಷರ ಕಲಿಯದಿದ್ದರೂ ತನ್ನ ಶ್ರಮದಿಂದ ಜೀವಜಲ ಹರಿಸಿದ ಜಿಲ್ಲೆಯ ಮತ್ತೋರ್ವ ಸಾಧಕನನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಪದ್ಮಶ್ರೀ ಗೌರವ: ಹೌದು, ಜಿಲ್ಲೆಯ ಬೋಳುಗುಡ್ಡೆಯಲ್ಲಿ ಏಕಾಂಗಿಯಾಗಿ ಸುರಂಗ ಕೊರೆದು ಜೀವಜಲವನ್ನು ತರಿಸಿದ ಭಗೀರಥನಿಗೆ ಪದ್ಮಶ್ರೀ ಒಲಿದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.
ಬೋಳುಗುಡ್ಡೆಯಲ್ಲಿ ನೀರು ತರಿಸಿದ ಸಾಧಕ:ಕೃಷಿಗೆ ಪ್ರಧಾನವಾಗಿ ಬೇಕಾದದ್ದು ನೀರು. ಕೃಷಿ ಭೂಮಿ ಇದ್ದರೂ ನೀರಿಲ್ಲದೇ ಕೃಷಿಯೇ ಮಾಡಲು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿ ತನ್ನ ಅಪರಿಮಿತ ಪರಿಶ್ರಮದಿಂದ ಬೋಳುಗುಡ್ಡೆಯಲ್ಲಿ ನೀರು ತಂದವರು ಅಮೈ ಮಹಾಲಿಂಗ ನಾಯ್ಕ ಅವರು. ಇವರ ಸಾಧನೆಗೆ ಇದೀಗ ಪದ್ಮಶ್ರೀ ಪ್ರಶಸ್ತಿ ಒಲಿದುಬಂದಿದೆ.
ಬರಡು ಭೂಮಿಯಲ್ಲಿ ನಿರಂತರ ಶ್ರಮ :ಅಮೈ ಮಹಾಲಿಂಗ ನಾಯ್ಕ ಅವರು ಕೇಪು ಗ್ರಾಮದ ಅಮೈ ಎಂಬ ಊರಿನವರು. ಇವರಿಗೆ ಸ್ವಂತ ಕೃಷಿ ಭೂಮಿ ಇರಲಿಲ್ಲ. ಅವರು ಅಮೈ ಮಹಾಬಲ ಭಟ್ಟ ಅವರ ಕೃಷಿಭೂಮಿಯಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದರು. 1978 ರಲ್ಲಿ ಮಹಾಲಿಂಗ ನಾಯ್ಕ ಅವರಿಗೆ ಮಹಾಬಲ ಭಟ್ ಅವರಿಂದ ಎರಡು ಎಕರೆ ಭೂಮಿ ಸಿಕ್ಕಿತ್ತು. ಆದರೆ ಸಿಕ್ಕ ಭೂಮಿಯಲ್ಲಿ ನೀರಿನ ಒರತೆ ಇಲ್ಲದೇ ಇದ್ದ ಕಾರಣ ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಅಲ್ಲಿಯೇ ಅವರು ಮನೆಯೊಂದನ್ನು ಕಟ್ಟಿದ್ದರು. ಕುಡಿಯುವ ನೀರಿಗೂ ನೆರೆಮನೆಯವರನ್ನು ಆಶ್ರಯಿಸಿದ್ದರು.