ಮಂಗಳೂರು :ಕೇಂದ್ರ ಬಜೆಟ್ನಲ್ಲಿ ಪಾಮ್ ಆಯಿಲ್ ಮೇಲೆ ಕೃಷಿ ಸೆಸ್ ಹೇರಿಕೆ ಮಾಡಲಾಗಿದೆ. ಇದರಿಂದ ಸಹಜವಾಗಿ ಪಾಮ್ ಆಯಿಲ್ ಬೆಲೆ ಹೆಚ್ಚಳವಾಗಲಿದ್ದು, ಜನ ಸಾಮಾನ್ಯರ ಮೇಲೆ ಹೊರೆ ಬೀಳಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾ ರಾಮನ್ ಮಂಡಿಸಿರುವ ಬಜೆಟ್ನಲ್ಲಿ ಪಾಮ್ ಆಯಿಲ್ ಮೇಲೆ ಶೇ.17.5ರಷ್ಟು ಕೃಷಿ ಸೆಸ್ ಹೇರಿಕೆ ಮಾಡಿದ್ದಾರೆ. ಸೆಸ್ ಏರಿಕೆ ಸಹಜವಾಗಿ ಜನರ ಮೇಲೆ ಹೊರೆ ಬೀಳಲಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಅಡುಗೆಗಳಿಗೆ ಸನ್ ಫ್ಲವರ್ ಮತ್ತು ಪಾಮ್ ಆಯಿಲ್ ಬಳಕೆ ಮಾಡಲಾಗುತ್ತದೆ.
ಹೋಟೆಲ್, ರೆಸ್ಟೋರೆಂಟ್, ಫಾಸ್ಟ್ ಫುಡ್, ಬೇಕರಿಗಳಲ್ಲಿ ಪಾಮ್ ಆಯಿಲ್ ಬಳಕೆ ಹೆಚ್ಚು. ಸನ್ ಫ್ಲವರ್ ಆಯಿಲ್ಗಿಂತ ಕಡಿಮೆ ಬೆಲೆ ಮತ್ತು ಕರಿದ ತಿಂಡಿಗಳ ಸ್ವಾದ ಹೆಚ್ಚು ಸಮಯ ಬಾಳಿಕೆ ಬರುವ ಕಾರಣದಿಂದ ಇದು ವ್ಯಾಪಕವಾಗಿ ಬಳಕೆಯಾಗುತ್ತದೆ.
ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗ ಸನ್ ಫ್ಲವರ್ ಆಯಿಲ್ ಬಳಸಿದ್ರೆ, ಬಡವರು ಪಾಮ್ ಆಯಿಲ್ ಬಳಕೆ ಮಾಡುತ್ತಾರೆ. ಪಾಮ್ ಆಯಿಲ್ ಬೆಲೆ ಕಳೆದ ಆರು ತಿಂಗಳಲ್ಲಿ ಭಾರಿ ಏರಿಕೆ ಕಂಡಿದೆ. 2020ರ ಮೇ ತಿಂಗಳಲ್ಲಿ 10 ಲೀಟರ್ಗೆ ರೂ. 700 ದರವಿದ್ದರೆ, ಇದೀಗ 1,100ಕ್ಕೆ ಏರಿಕೆಯಾಗಿದೆ. ಆರು ತಿಂಗಳಲ್ಲಿ ಶೇ.50ರಷ್ಟು ದರ ಹೆಚ್ಚಳವಾಗಿದೆ.