ಮಂಗಳೂರು :ದ.ಕ ಜಿಲ್ಲೆಯ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಇ-ಟಿಕೆಟ್ ಮೂಲಕ ಭಕ್ತರ ಪ್ರವೇಶಕ್ಕೆ ಇಂದಿನಿಂದ ಅವಕಾಶ ನೀಡಲಾಗಿದೆ. ಎರಡುವರೆ ತಿಂಗಳ ಬಳಿಕ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಮೊದಲ ದಿನವಾದ ಇಂದು ಹೆಚ್ಚಿನ ಭಕ್ತರಿಲ್ಲದೆ ದೇಗುಲ ಖಾಲಿ ಖಾಲಿಯಾಗಿತ್ತು.
ಶ್ರೀಕ್ಷೇತ್ರ ಕಟೀಲಿನಲ್ಲಿ ಇಂದಿನಿಂದ ಇ-ಟಿಕೆಟ್ ಮೂಲಕ ಭಕ್ತರ ಪ್ರವೇಶಕ್ಕೆ ಅವಕಾಶ ಸರ್ಕಾರದ ನಿರ್ದೇಶನಗಳನ್ನು ಪಾಲಿಸಿಯೇ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರದೊಂದಿಗೆ ಭಕ್ತರು ದೇವಿಯ ದರ್ಶನ ಪಡೆದು ನಿರ್ಗಮನ ದ್ವಾರದ ಮೂಲಕವೇ ಹೊರ ಬರಬೇಕು. ದೇಗುಲ ಪ್ರದಕ್ಷಿಣೆ, ದೀರ್ಘದಂಡ ನಮಸ್ಕಾರ, ತೀರ್ಥ ಪ್ರಸಾದ, ಗಂಧ ಪ್ರಸಾದ, ಅನ್ನಪ್ರಸಾದ ವಿತರಣೆ, ಇನ್ನಿತರ ಯಾವುದೇ ಸೇವೆಗಳಿಗೆ ಅವಕಾಶ ನೀಡಲಾಗಿಲ್ಲ.
ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ದೇವಸ್ಥಾನದ ಪ್ರವೇಶ ದ್ವಾರದಲ್ಲಿಯೇ ಸ್ಕ್ರೀನಿಂಗ್ ವ್ಯವಸ್ಥೆ ಇದೆ. ಜ್ವರ ಮತ್ತಿತರ ಸೋಂಕಿನ ಲಕ್ಷಣ ಇರುವವರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಸ್ಯಾನಿಟೈಸರ್ ವ್ಯವಸ್ಥೆಯನ್ನು ಎರಡು ಕಡೆಗಳಲ್ಲಿ ಇಡಲಾಗಿದೆ. ಭಕ್ತರು ದೇಗುಲ ಪ್ರವೇಶಕ್ಕೆ ಮುನ್ನ ಕೈಶುಚಿಗೊಳಿಸಿಯೇ ಪ್ರವೇಶಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ದೇವಸ್ಥಾನದ ಉದ್ದಕ್ಕೂ ಬಿಳಿ ಬಾಕ್ಸ್‌ಗಳನ್ನು ಮಾಡ್ಲಾಗಿದೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಶ್ರೀಕ್ಷೇತ್ರ ಕಟೀಲಿನಲ್ಲಿ ತಿರುಪತಿ ದೇವಸ್ಥಾನದ ಮಾದರಿ ಇ-ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಆದರೆ, ನಾವು ಶುಲ್ಕ ವಿನಾಯಿತಿ ಇ-ಟಿಕೆಟ್ ವ್ಯವಸ್ಥೆ ಮಾಡಿದ್ದೇವೆ. ಕಟೀಲು ದೇವಳದ ದೇವಸ್ಥಾನದ ಅಧಿಕೃತ ವೆಬ್‌ಸೈಟ್ www.kateeludevi.in ನಲ್ಲಿ ಆನ್‌ಲೈನ್ ಮೂಲಕ ಭಕ್ತರು ತಮ್ಮ ದರ್ಶನದ ಸಮಯ ನಿಗದಿಪಡಿಸಿ ದೇವಿಯ ದರ್ಶನ ಪಡೆಯಬಹುದು ಎಂದರು.
ಈ ವೆಬ್‌ಸೈಟ್‌ಗೆ ಹೋಗಿ ಇ-ದರ್ಶನ ಎಂಬುದನ್ನು ಡಬಲ್ ಕ್ಲಿಕ್ ಮಾಡಿ ಭಕ್ತರು ತಮ್ಮ ಸಮಯವನ್ನು ಕಾಯ್ದಿರಿಸಬಹುದು. ಈ ಮೂಲಕ ದೇವಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ. 15 ನಿಮಿಷಕ್ಕೆ 60 ಮಂದಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈಗ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಭಕ್ತರ ಸಂಖ್ಯೆ ವಿರಳವಾಗಿದೆ. ಹೆಚ್ಚು ಜನ ಬರುವ ಸಂದರ್ಭ ಮೊದಲ ಆದ್ಯತೆ ಆನ್‌ಲೈನ್ ಬುಕಿಂಗ್‌ನವರಿಗೆ ನೀಡಲಾಗುತ್ತದೆ. ಆ ಬಳಿಕ ಸಮಯ ಇದ್ದಲ್ಲಿ ಉಳಿದ ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಸೋಂಕು ನಿವಾರಣೆ ಆಗುವವರೆಗೆ ಈ ವ್ಯವಸ್ಥೆ ಹೀಗೆ ಇರಲಿದೆ. ಅಲ್ಲದೆ ವಿಶೇಷ ದಿನಗಳಲ್ಲಿ ದೇವಿಯ ದರ್ಶನಕ್ಕೆ ಅಗತ್ಯ ಬಿದ್ದಲ್ಲಿ ಇ-ಟಿಕೆಟ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹರಿನಾರಾಯಣ ಆಸ್ರಣ್ಣರು ತಿಳಿಸಿದರು.