ಮಂಗಳೂರು: ಮಂಗಳೂರಿನ ಬೀಚ್ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಲಿ ಟೂರಿಸಂ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಹೆಲಿ ಟೂರಿಸಂ ಆರಂಭಿಸುವ ಚಿಂತನೆ:
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನವಮಂಗಳೂರು ಬಂದರು ಮೂಲಕ ಕ್ರೂಸ್ಗಳಲ್ಲಿ ಬರುವ ವಿದೇಶಿ ಪ್ರವಾಸಿಗರಿಗೆ ಹೆಲಿ ಟೂರಿಸಂ ವ್ಯವಸ್ಥೆ ಮಾಡುವ ಮೂಲಕ ಪ್ರವಾಸಿ ತಾಣಗಳನ್ನು ತೋರಿಸಲು ಬೇಕಾದ ವ್ಯವಸ್ಥೆ ಮಾಡಬೇಕಾಗಿದೆ. ಅದಕ್ಕೂ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಬೀಚ್ಗಳಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ವ್ಯವಸ್ಥೆಗಳು ಆಗಬೇಕು. ಇದು ಪೂರ್ಣವಾದ ಬಳಿಕ ಹೆಲಿ ಟೂರಿಸಂ ಆರಂಭಿಸುವ ಚಿಂತನೆಯಿದೆ ಎಂದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಂಗಳೂರಿನ ಇಡ್ಯಾ ಮತ್ತು ತಣ್ಣೀರುಬಾವಿ ಬೀಚ್ಗೆ ಬ್ಲೂ ಫ್ಲ್ಯಾಗ್ ಮಾನ್ಯತೆಗೆ ಪ್ರಕ್ರಿಯೆ ನಡೆಯುತ್ತಿದೆ. ಎರಡು ಬೀಚ್ಗಳ ಸುಮಾರು ಒಂದು ಕಿಲೋಮೀಟರ್ ಬ್ಲೂ ಪ್ಲಾಗ್ ಮಾನ್ಯತೆ ಸಿಗಲಿದ್ದು, ಪ್ರಕ್ರಿಯೆ ಮುಗಿದ ಬಳಿಕ ಯಾವುದೇ ಕ್ಷಣದಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗಲಿದೆ ಎಂದರು.
ಮಂಗಳೂರಿನ ಒಂದು ಬೀಚ್ನಿಂದ ಮತ್ತೊಂದು ಬೀಚ್ಗೆ ತೆರಳುವ ಪ್ರವಾಸಿಗರಿಗೆ ಬಸ್ ವ್ಯವಸ್ಥೆ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಬೆಂಗ್ರೆ ಬೀಚ್ ಅಭಿವೃದ್ಧಿ ಪಡಿಸಲು, ಅಲ್ಲಿ ಗಾಲ್ಫ್ ರೆಸಾರ್ಟ್ ಆರಂಭಿಸಿ ಸುಮಾರು 800 ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಸಸಿಹಿತ್ಲು ಮತ್ತು ತಣ್ಣೀರು ಬಾವಿ ಬೀಚ್ನಲ್ಲಿ ಸರ್ಫಿಂಗ್ ಸ್ಕೂಲ್ ಆರಂಭಿಸುವ ಚಿಂತನೆಯಿದೆ ಎಂದರು.
ಪಿಲಿಕುಳ ಝೂಗೆ ಮೂರು ಪ್ರಾಣಿಗಳನ್ನು ತರುವ ಚಿಂತನೆ ಇದೆ. ಆನೆ, ಝೀಬ್ರಾ ಮತ್ತು ಜಿರಾಫೆಯನ್ನು ಪ್ರಾಣಿಗಳ ವಿನಿಮಯ ಮೂಲಕ ತರುವ ಚಿಂತನೆ ಇದೆ. ಈ ಮೂಲಕ ಈ ಝೂವನ್ನು ಇನ್ನಷ್ಟು ಆಕರ್ಷಕ ಮಾಡಲಾಗುವುದು ಎಂದರು.
ಇದನ್ನೂ ಓದಿ:ಜಲ ಜೀವನ್ ಮಿಷನ್ ಅಡಿ 2023ಕ್ಕೆ ಎಲ್ಲ ಮನೆಗಳಿಗೂ ಕುಡಿಯುವ ನೀರು: ಸಚಿವ ಈಶ್ವರಪ್ಪ ಭರವಸೆ
ಮಂಗಳೂರಿಗೆ ದೇಶದ ವಿವಿಧ ಕಡೆಗಳಿಂದ ಪ್ರವಾಸಿಗರನ್ನು ಆಕರ್ಷಿಸಲು ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಮಂಗಳೂರಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಫೋಟೋಗಳನ್ನು ಹಾಕಿಸುವ ಪ್ರಯತ್ನಗಳಾಗಿದೆ. ಈ ರೀತಿ ಆದರೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಂಗಳೂರಿಗೆ ಪ್ರವಾಸ ಬರಲು ಪ್ರೇರಣೆಯಾಗಲಿದೆ ಎಂದರು.