ಮಂಗಳೂರು :ಪಿಹೆಚ್‌ಡಿ ವಿದ್ಯಾರ್ಥಿನಿಯ ಭಾವಚಿತ್ರವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪದಡಿ ಪ್ರಾಧ್ಯಾಪಕರೊಬ್ಬರನ್ನು ಮಂಗಳೂರು ನಗರದ ಸೈಬರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿವಿ ಪ್ರಾಧ್ಯಾಪಕ ಡಾ. ಕೊಂಡೂರು ಸುಧೀರ್ ಕುಮಾರ್ ಬಂಧಿತ ಆರೋಪಿ. ವಿದ್ಯಾರ್ಥಿನಿ 2019ರಿಂದ ಮಂಗಳೂರಿನ ಪ್ರಾಧ್ಯಾಪಕಿಯೊಬ್ಬರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಮಾಡುತ್ತಿದ್ದರು.
2018ರಲ್ಲಿ ಆರೋಪಿ ಡಾ. ಕೊಂಡೂರು ಸುಧೀರ್ ಕುಮಾರ್ ವಿದ್ಯಾರ್ಥಿನಿಗೆ ಪರಿಚಯವಾಗಿದ್ದ. ಈ ಸಂದರ್ಭದಲ್ಲಿ ಆತ ತನ್ನನ್ನು ಪಿಹೆಚ್ಡಿಗೆ ಮಾರ್ಗದರ್ಶಕನನ್ನಾಗಿ ಆಯ್ಕೆ ಮಾಡುವಂತೆ ಒತ್ತಾಯಿಸಿದ್ದ. ಆಕೆ ಒಪ್ಪಿ ವಿಶ್ವವಿದ್ಯಾನಿಲಯಕ್ಕೆ ಅನುಮತಿಗೆ ಕಳುಹಿಸಿದ್ದಾರೆ. ಆದರೆ, ವಿವಿಯು ಆ ವ್ಯಕ್ತಿಗೆ ಅರ್ಹತೆಯಿಲ್ಲ ಎನ್ನುವ ಕಾರಣಕ್ಕೆ ಕೋರಿಕೆ ನಿರಾಕರಿಸಿತ್ತು.
ಇದಾದ ಬಳಿಕ ಈ ಪ್ರಾಧ್ಯಾಪಕ ವಿದ್ಯಾರ್ಥಿನಿಗೆ ಮತ್ತು ಆಕೆಯ ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದ ಎಂದು ವಿದ್ಯಾರ್ಥಿನಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಆತ ವಿದ್ಯಾರ್ಥಿನಿಯ ಭಾವಚಿತ್ರವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿನಿ ನಗರದ ಸೈಬರ್ ಠಾಣೆಯಲ್ಲಿ 2021ರ ಮಾರ್ಚ್ 10 ರಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ಷರತ್ತು ಬದ್ಧ ಜಾಮೀನು ಮೇಲೆ ಬಿಡುಗಡೆಗೊಳಿಸಿದೆ ಎಂದು ತಿಳಿದು ಬಂದಿದೆ.