ಮಂಗಳೂರು: ರೋಗಿಯೊಬ್ಬರ ಇಎಸ್ಐ ಔಷಧಿ ಬಿಲ್ ಮಂಜೂರು ಮಾಡಲು 2 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಹಿರಿಯ ಫಾರ್ಮಸಿಸ್ಟ್ ಒಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಮೆಡಿಕಲ್ ಬಿಲ್ ಮಂಜೂರು ಮಾಡಲು ಪಣಂಬೂರಿನ ಇಎಸ್ಐ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ವಿಷ್ಣುಮೂರ್ತಿ ಅವರು 2000 ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿ ಕಚೇರಿಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಲಂಚ ಸ್ವೀಕರಿಸುವ ವೇಳೆಯಲ್ಲಿ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕಿಡ್ನಿ ಕಾಯಿಲೆಯಿಂದ ಪಣಂಬೂರಿನ ವ್ಯಕ್ತಿಯೊಬ್ಬರು ಬಳಲುತ್ತಿದ್ದರು. ಇವರ ಪತ್ನಿ ಬೇಕರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇಎಸ್ಐ ಸದಸ್ಯತ್ವವನ್ನು ಹೊಂದಿದ್ದರು. ಕೆಎಂಸಿ ವೈದ್ಯರ ಸಲಹೆಯಂತೆ ಇಎಸ್ಐ ಡಿಸ್ಪೆನ್ಸರಿಯಿಂದ ಮಾತ್ರೆ, ಇಂಜೆಕ್ಷನ್ ಇತ್ಯಾದಿಗಳನ್ನು ಪಡೆದುಕೊಂಡು ಹೋಗಿ ಮಂಗಳೂರು ಆಸ್ಪತ್ರೆಯಲ್ಲಿ ಡಯಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಇಎಸ್ಐ ಡಿಸ್ಪೆನ್ಸರಿಯಲ್ಲಿ ಮಾತ್ರೆ ಮತ್ತು ಇಂಜೆಕ್ಷನ್ ಇಲ್ಲದ ಕಾರಣ ಖಾಸಗಿ ಮೆಡಿಕಲ್ನಿಂದ ಖರೀದಿಸಿ ಆ ಬಿಲ್ ಅನ್ನು ಇಎಸ್ಐ ಡಿಸ್ಪೆನ್ಸರಿಗೆ ನೀಡಿದ್ದಲ್ಲಿ ಬಿಲ್ ಮಂಜೂರಾತಿಯಾಗಿ ದೂರುದಾರರ ಪತ್ನಿಯ ಖಾತೆಗೆ ಹಣ ಜಮೆಯಾಗುತ್ತದೆ. ಆದ್ರೆ, ಬಿಲ್ ಮಂಜೂರು ಮಾಡಲು ಫಾರ್ಮಸಿಸ್ಟ್ ವಿಷ್ಣುಮೂರ್ತಿ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿ, ಆರೋಪಯನ್ನ ವಶಕ್ಕೆ ಪಡೆದಿದ್ದಾರೆ.
ಎಸಿಬಿ ಪಶ್ಚಿಮ ವಲಯದ ಪೊಲೀಸ್ ಅಧೀಕ್ಷಕರಾದ ಸಿ.ಎ ಸೈಮನ್ ಅವರ ಮಾರ್ಗದರ್ಶನದಲ್ಲಿ ಎಸಿಬಿ ಪೊಲೀಸ್ ಠಾಣೆ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಉಪಾಧೀಕ್ಷಕರಾದ ಕೆ ಸಿ ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಮತ್ತು ಗುರುರಾಜ್ ಹಾಗೂ ಸಿಬ್ಬಂದಿ ಹರಿಪ್ರಸಾದ್, ರಾಧಾಕೃಷ್ಣ ಡಿ ಎ. ರಾಧಾಕೃಷ್ಣ ಕೆ, ಉಮೇಶ್, ವೈಶಾಲಿ, ಗಂಗಣ್ಣ, ಆದರ್ಶ, ರಾಕೇಶ್, ಭರತ್, ಮೋಹನ್ ಸಾಲಿಯಾನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಕತ್ತು ಸೀಳಿ 9 ವರ್ಷದ ಬಾಲಕಿ ಕೊಲೆ: ರೇಪ್ ಬಳಿಕ ಹತ್ಯೆ ಶಂಕೆ