ಕರ್ನಾಟಕ

karnataka

ETV Bharat / city

ಮಾರಿ ಕಳೆವ ಮಾಂತ್ರಿಕ ಶಕ್ತಿ 'ಆಟಿ ಕಳೆಂಜ'; ತುಳುನಾಡಿನಲ್ಲೊಂದು ವಿಶಿಷ್ಟ ಆಚರಣೆ - ದಕ್ಷಿಣ ಕನ್ನಡ

ಊರಿಗೆ ಬರುವ ರೋಗ ರುಜಿನಗಳನ್ನು ಕಳೆಯಲೆಂದು ತುಳುನಾಡಿನಲ್ಲಿ ಆಷಾಢ(ಆಟಿ) ಮಾಸದಲ್ಲಿ 'ಆಟಿ ಕಳೆಂಜ' ಎಂಬ ಜನಪದ ಆಚರಣಾತ್ಮಕ ಕಲಾ ಪ್ರಕಾರವೊಂದು ಮನೆ ಮನೆಗೆ ಬರುತ್ತದೆ. ಹೀಗೆ ಬಂದ ಕಳೆಂಜನು ತಮ್ಮ ಮನೆಗೆ ಬಂದ ಮಾರಿಯನ್ನು ಕಳೆಯುತ್ತಾನೆ ಎಂಬ ನಂಬಿಕೆ ಕರಾವಳಿ ಜನರದ್ದು.

aati kalenja traditional folk art of tulunadu observed to tackle The power of evil
ಮಾರಿ ಕಳೆವ ಮಾಂತ್ರಿಕ ಶಕ್ತಿ 'ಆಟಿ ಕಳೆಂಜ'; ತುಳುನಾಡಿನಲ್ಲೊಂದು ವಿಶಿಷ್ಟ ಆಚರಣೆ

By

Published : Aug 5, 2021, 7:02 PM IST

Updated : Aug 5, 2021, 8:28 PM IST

ಮಂಗಳೂರು:ಆಷಾಢ(ಆಟಿ) ಮಾಸದಲ್ಲಿ ತುಳುನಾಡಿನಲ್ಲಿ 'ಆಟಿ ಕಳೆಂಜ' ಎಂಬ ಜನಪದ ಆಚರಣಾತ್ಮಕ ಕಲಾ ಪ್ರಕಾರವೊಂದು ಮನೆ ಮನೆಗೆ ಭೇಟಿ ನೀಡುತ್ತೆ. ಮನೆಯಲ್ಲಿ ಇರುವ ಮಾರಿಯನ್ನು ಕಳೆಯುತ್ತೆ ಎಂಬ ನಂಬಿಕೆ ಜನರಲ್ಲಿದೆ. ಇದೊಂದು ಕಾಲಬದ್ಧ ಕುಣಿತವಾಗಿದ್ದು, ಆಟಿ ಕಳೆಂಜ ಎಂಬ ಪದದಲ್ಲಿಯೇ ಕಾಲವನ್ನು ಸೂಚಿಸಲಾಗಿದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜುಲೈ 15ರ ಬಳಿಕ ಆಗಸ್ಟ್ 15-16ರ ನಡುವಿನ ಕಾಲವೇ ಆಟಿ ಅಥವಾ ಆಷಾಢ.

ಮಾರಿ ಕಳೆವ ಮಾಂತ್ರಿಕ ಶಕ್ತಿ 'ಆಟಿ ಕಳೆಂಜ'; ತುಳುನಾಡಿನಲ್ಲೊಂದು ವಿಶಿಷ್ಟ ಆಚರಣೆ

ಜಡಿ ಮಳೆ ಕಾರಣ ಎಲ್ಲ ಕಡೆಗಳಲ್ಲಿ ಹುಲ್ಲು, ಕಳೆ, ಕುರುಚಲು ಗಿಡಗಳು ಬೆಳೆದು ಸೊಳ್ಳೆ, ನುಸಿ ಬಾಧೆ ವಿಪರೀತವಾಗಿರುತ್ತದೆ‌. ಅಲ್ಲದೇ ಮಳೆಯು ಹೆಚ್ಚಾಗಿರುವ ಕಾರಣ, ಜ್ವರ, ಶೀತ, ಕೆಮ್ಮು ಮುಂತಾದ ಸಾಂಕ್ರಾಮಿಕ ರೋಗಗಳ ಹಾವಳಿಯೂ ಅಧಿಕವಾಗಿರುತ್ತದೆ.
ಆದ್ದರಿಂದ ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ರೋಗ ರುಜಿನಗಳನ್ನು, ಭಯ ನಿವಾರಣೆಗೆ ಆಟಿ ಕಳೆಂಜನು ಮಾಂತ್ರಿಕನಾಗಿ ಬಂದು ಜನರಲ್ಲಿ ಉಂಟಾಗಿರುವ ಭಯವನ್ನು ಹೋಗಲಾಡಿಸುತ್ತಾನೆ‌. ಅಲ್ಲದೇ ಕರಾವಳಿಯಲ್ಲಿ ಆಟಿಯ ಸಮಯದಲ್ಲಿ ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆಯಿದೆ.

ಆದ್ದರಿಂದ ಆಟಿಯ ಒಂದು ತಿಂಗಳ ಕಾಲ ದೈವಸ್ಥಾನಗಳ ಬಾಗಿಲು ಹಾಕಲಾಗುತ್ತದೆ‌. ಈ ಸಂದರ್ಭದಲ್ಲಿ ಊರಿನ ಜವಾಬ್ದಾರಿಯನ್ನು ಆಟಿ ಕಳೆಂಜ ವಹಿಸಿ ಊರಿಗೆ ಬಂದ ಸಂಕಷ್ಟವನ್ನು ಕಳೆಯುತ್ತಾನೆ ಎಂದು ಜನಪದರು ನಂಬುತ್ತಾರೆ‌.
ಮನೆಯನ್ನು ಸೇರಿಕೊಂಡಿರುವ ಮಾರಿ ಓಡಿ ಆಟಿ ಕಳೆಂಜ!
ಆಟಿ ಕಳೆಂಜ ಕುಣಿತ ಹಾಗೂ ನೃತ್ಯದ ಮೂಲಕ ದುಷ್ಟ ಶಕ್ತಿಯನ್ನು ಹೋಗಲಾಡಿಸುತ್ತಾನೆ ಎಂಬ ನಂಬಿಕೆ ಇದೆ. ಈ ಸಾಂಪ್ರದಾಯಿಕ ನೃತ್ಯವನ್ನು ನಲಿಕೆ (ಭೂತಕೋಲದ ವೇಷ ಹಾಕುವವರು) ಸಮುದಾಯದವರು ಮಾಡುತ್ತಾರೆ. ಅವರು ಆಟಿ ಕಳೆಂಜದ ವೇಷವನ್ನು ಹಾಕಿ ಮನೆ ಮನೆಗೆ ಹೋಗುವುದರಿಂದ ಮನೆಯನ್ನು ಸೇರಿಕೊಂಡಿರುವ ಮಾರಿ ಓಡಿಹೋಗುತ್ತದೆ ಎಂಬ ಮಾತಿದೆ.
ಕಳೆಂಜದ ವೇಷವು ತೆಂಗಿನ ಎಳೆಯ ಗರಿಗಳಿಂದ ಹೆಣೆದು ಮಾಡಿದ ಉಡುಗೆ, ಕೆಂಪು ಚಲ್ಲಣ, ಅಡಕೆ ಮರದ ಹಾಳೆಯಿಂದ ಮಾಡಿದ ಶಿರಸ್ತ್ರಾಣ, ಗಗ್ಗರವನ್ನು ಧರಿಸಿರುತ್ತದೆ. ಕೈಯ್ಯಲ್ಲೊಂದು ಪನೆತತ್ರ(ಕೊಡೆ)ವನ್ನು ಹಿಡಿದು ಅದನ್ನು ಗಿರಗಿರನೆ ತಿರುಗಿಸುತ್ತಾ ಜೊತೆಗಿರುವ ತೆಂಬರೆ ಬಡಿದು ಹಾಡುವ ಹಾಡಿನ ಲಯಕ್ಕೆ ಸರಿಯಾಗಿ ಕುಣಿಯುತ್ತಾನೆ.
ಆಟಿಡ್ ಬತ್ತೆನೋ ಕಳೆಂಜೆ ಮಾರಿ ಕಳೆಪ್ಪೇನೋ(ಆಷಾಢದಲ್ಲಿ‌ ಬಂದಾನೋ‌ ಕಳೆಂಜ ಮಾರಿ ಕಳೆವಾನೋ) ಎಂಬ ಪದ್ಯದಲ್ಲಿಯೇ ಇರುವಂತೆ ಆಟಿ ಕಳೆಂಜ ಆಚರಣೆಯ ಉದ್ದೇಶವೇ ಮಾರಿ ಕಳೆಯುವುದು ಆಗಿರುತ್ತದೆ.

ಇದನ್ನೂ ಓದಿ: ಚಿಕಿತ್ಸೆಗೆ ಬೇಕಿದೆ ಆರ್ಥಿಕ ನೆರವು:ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಯಕ್ಷಗುರು ಗಣೇಶ ಕೊಲೆಕಾಡಿ

ಅಕ್ಕಿ, ಫಲವಸ್ತು, ತೆಂಗಿನ ಕಾಯಿ ದಾನ
ಕಳೆಂಜನು ಮನೆಮನೆಗೆ ಭೇಟಿ ನೀಡಿ,‌ ಮನೆಯ ಯಜಮಾನನಲ್ಲಿ ಕುಣಿಯಲು ಅನುಮತಿ ಪಡೆದು ಕುಣಿಯುತ್ತಾನೆ. ಆ ಬಳಿಕ ಪ್ರತಿ ಮನೆಯವರು ಅಕ್ಕಿ, ಫಲವಸ್ತುಗಳು, ತೆಂಗಿನ ಕಾಯಿ, ಎಲೆ-ಅಡಿಕೆ, ಹಣವನ್ನು ದಾನವಾಗಿ ನೀಡುತ್ತಾರೆ.

ಈ ಮೂಲಕ ಮನೆಗೆ ಸೋಕಿದ ದುಷ್ಟ ಶಕ್ತಿಯನ್ನು ಕಳೆಯುತ್ತಾನೆ. ನಂತರ ತೋಟದಲ್ಲಿ ಬೆಳೆದ ಬಾಳೆಗೊನೆ, ತೆಂಗಿನ ಕಾಯಿಯನ್ನು ಹೇಳದೆ ಕೇಳದೆ ಕೊಂಡೊಯ್ಯುವ ಪದ್ಧತಿ ಇದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಇದರಿಂದ ಬೆಳೆಗಳಿಗೆ ತಟ್ಟಿದ ರೋಗ ಮಾಯವಾಗುತ್ತದೆಯಂತೆ.
ಹೀಗೆ ಮನೆಯ ಅಂಗಳಕ್ಕೆ ಬಂದು ಕುಣಿದ ಆಟಿ ಕಳೆಂಜನಿಗೆ ಹಿಂದಿರುಗುವಾಗ ಗೆರಸೆಯಲ್ಲಿ(ತಡ್ಪೆ) ಭತ್ತ ಅಥವಾ ಅಕ್ಕಿ, ಹುಳಿ, ಮೆಣಸು, ಉಪ್ಪು, ಒಂದು ತುಂಡು ಇದ್ದಲು, ಸ್ವಲ್ಪ ಅಟ್ಟದ ಮಸಿ ಇಟ್ಟುಕೊಡುತ್ತಾರೆ.

ಅಲ್ಲದೇ ಆತ ಅಂಗಳ ಇಳಿದು ಹೋಗುವಾಗ ಸುಣ್ಣ ಮಿಶ್ರಿತ ಅರಿಶಿಣದ ನೀರಿನಲ್ಲಿ ಆತನಿಗೆ ಆರತಿ ಎತ್ತಿ ಅದನ್ನು ಆತನಿಗೆ ನಿವಾಳಿಸಿ ಆ ನೀರನ್ನು ದಾರಿಗಡ್ಡವಾಗಿ ಉದ್ದಕ್ಕೆ ಚೆಲ್ಲುತ್ತಾರೆ.

ಹೀಗೆ ಮಾಡಿದರೆ ಮನೆಯ ಅಶುಭ ಕಳೆಯುತ್ತದೆ ಎಂದು ತುಳುನಾಡ ಜನರ ನಂಬಿಕೆಯಿದೆ. ಇಂದು ಈ ಕುಣಿತ ಪ್ರಕಾರವು ಅಳಿವಿನಂಚಿನಲ್ಲಿದ್ದು ಅಲ್ಲೊಂದು, ಇಲ್ಲೊಂದು ಕಡೆಗಳಲ್ಲಿ ಕುಣಿತ ಕಾಣಿಸಿಕೊಳ್ಳುತ್ತಿದೆ. ಜನಪದರು ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿದ್ದ ಇಂತಹ ಆಚರಣೆಗಳನ್ನು ಉಳಿಸಬೇಕಾಗಿದೆ.

Last Updated : Aug 5, 2021, 8:28 PM IST

ABOUT THE AUTHOR

...view details