ಮಂಗಳೂರು :ನಗರದ ಹೊರವಲಯದಲ್ಲಿರುವ ಕೈಕಂಬದ ಕಂದಾವರ ಎಂಬಲ್ಲಿ ರಾತ್ರಿ ವೇಳೆ ದೈವಸ್ಥಾನವೊಂದಕ್ಕೆ ಅಕ್ರಮವಾಗಿ ಹೊಕ್ಕು, ದೈವದ ಕಲ್ಲಿನಲ್ಲಿ ಉರಿಯುತ್ತಿದ್ದ ದೀಪವನ್ನು ನಂದಿಸಿ, ವಿಕೃತಿ ಮೆರೆದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕಂದಾವರ ಪದವು ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಕಂದಾವರ ಚರ್ಚ್ ಬಳಿ ವಾಸಿಸುತ್ತಿದ್ದ ಹಮೀದ್(27) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ರಾಹುಗುಳಿಗ ದೈವದ ಕಲ್ಲಿನಲ್ಲಿ ಉರಿಯುತ್ತಿದ್ದ ದೀಪವನ್ನು ನಂದಿಸಿದ್ದಾನೆ.
ದೈವಸ್ಥಾನವೊಂದಕ್ಕೆ ಅಕ್ರಮವಾಗಿ ಹೊಕ್ಕಿದ್ದ ವ್ಯಕ್ತಿ ಬಂಧನ ಬಳಿಕ ಆ ಕಲ್ಲಿಗೆ ರಕ್ತ ಹರಿಸಿದ್ದಾನೆ. ಅಲ್ಲದೆ ದೈವಸ್ಥಾನದ ಬಲ ಬದಿಯಲ್ಲಿರುವ ಆಯದ ಕಲ್ಲಿಗೂ, ದೈವಸ್ಥಾನದ ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಡಿದ್ದಾನೆ. ಈತ ಕೈಗೆ ಗಾಯಮಾಡಿಕೊಂಡು ದೈವಸ್ಥಾನಕ್ಕೆ ಪ್ರವೇಶಿಸಿರುವುದಾಗಿ ತಿಳಿದು ಬಂದಿದೆ.
ಧಾರ್ಮಿಕ ಭಾವನೆಗಳಿಗೆ, ನಂಬಿಕೆಗೆ ಧಕ್ಕೆ ತಂದಿರುವುದಾಗಿ ದೈವಸ್ಥಾನದ ಅಧ್ಯಕ್ಷ ಬಜ್ಪೆ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಬ್ಬುಸ್ವಾಮಿಯ ದರ್ಶನ ಆಯೋಜಿಸಿರುವ ಭಕ್ತರು ದುಷ್ಕರ್ಮಿ ಪತ್ತೆಯಾಗಬೇಕೆಂದು ಮನವಿ ಮಾಡಿದ್ದರು. ಇದೀಗ ದೂರು ದಾಖಲಾದ ಒಂದೇ ಗಂಟೆಯಲ್ಲೇ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ:ಎರಡು ವರ್ಷದ ಬಳಿಕ ಕಳೆಗಟ್ಟಿದ ಶರಣಬಸವೇಶ್ವರರ ಜಾತ್ರೆ : ಇಂದು ಸಂಜೆ ಭವ್ಯ ರಥೋತ್ಸವ